ಬಜೆಟ್ ಅಧಿವೇಶನ: ನಿರುದ್ಯೋಗ, ಹಣದುಬ್ಬರ, ಮಣಿಪುರ ವಿಷಯಗಳನ್ನೆತ್ತಲಿರುವ ಕಾಂಗ್ರೆಸ್

Update: 2024-02-01 16:48 GMT

 ಸೋನಿಯಾ ಗಾಂಧಿ , ಮಲ್ಲಿಕಾರ್ಜುನ ಖರ್ಗೆ | Photo: ANI 

ಹೊಸದಿಲ್ಲಿ  ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಅಶಾಂತಿ ವಿಷಯಗಳನ್ನು ತಾನು ಪ್ರಸ್ತಾವಿಸುವುದಾಗಿ ಕಾಂಗ್ರೆಸ್ ಹೇಳಿದೆ. 

ಬುಧವಾರ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಗುಂಪಿನ ಸಭೆಯಲ್ಲಿ ಪಕ್ಷದ ಕಾರ್ಯತಂತ್ರಗಳನ್ನು ಚರ್ಚಿಸಲಾಯಿತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

‘ಬಜೆಟ್ ಅಧಿವೇಶನಕ್ಕೆ ಮೊದಲು ಜಂಟಿ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣವು ಸರಕಾರವು ಭವಿಷ್ಯದಲ್ಲಿ ತೆಗೆದುಕೊಳ್ಳುವ ಕ್ರಮಗಳ ಕುರಿತಾಗಿತ್ತು. ಹಣದುಬ್ಬರ, ನಿರುದ್ಯೋಗ, ರೈತರ ಆದಾಯ ದ್ವಿಗುಣ ಮತ್ತು ಮಣಿಪುರ ವಿಷಯವನ್ನು ಭಾಷಣವು ಉಲ್ಲೇಖಿಸಿಲ್ಲ. ಈ ವಿಷಯಗಳನ್ನು ಎತ್ತಲು ನಾವು ಬಯಸಿದ್ದೇವೆ ’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮತ್ತು ಬಜೆಟ್ ಚರ್ಚೆಗಳ ಸಂದರ್ಭ ಎತ್ತಬೇಕಿರುವ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಕೆ.ಸುರೇಶ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News