2040ರ ವೇಳೆಗೆ ದೇಶದಲ್ಲಿ ಪ್ರತಿವರ್ಷ 20 ಲಕ್ಷ ಕ್ಯಾನ್ಸರ್ ಪ್ರಕರಣ
ಮುಂಬೈ: ಕಳೆದ ಎರಡು ದಶಕಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿಲ್ಲ. ಆದರೆ ಜನಸಂಖ್ಯೆ ಏರಿಕೆ ಹಾಗೂ ಉತ್ತಮ ರೋಗಪತ್ತೆ ವಿಧಾನಗಳಿಂದಾಗಿ ಪತ್ತೆಯಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಸ್ತುತ ದೇಶದಲ್ಲಿ ಪ್ರತಿ ವರ್ಷ 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 2040ರ ವೇಳಗೆ ಇದು 20 ಲಕ್ಷಕ್ಕೆ ಹೆಚ್ಚುವ ನಿರೀಕ್ಷೆ ಇದೆ.
ಇಲ್ಲಿನ ಬಿಕೆಸಿಯಲ್ಲಿ ಗುರುವಾರ ಆರಂಭವಾದ ಇಂಡಿಯನ್ ಕ್ಯಾನ್ಸರ್ ಕಾಂಗ್ರೆಸ್ ಅಧಿವೇಶನದಲ್ಲಿ ಈ ಭಯಾನಕ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಕ್ಯಾನ್ಸರ್ ರೋಗದ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ತಡೆಗೆ ಅಗತ್ಯ ಮೂಲಸೌಕರ್ಯ ಅಭಿವೃಧ್ಧಿಪಡಿಸುವುದು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಅಗತ್ಯತೆಯನ್ನು ಸಮಾವೇಶ ಪ್ರತಿಪಾದಿಸಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಸಮಾವೇಶದಲ್ಲಿ ಈ ಬಾರಿ ಕ್ಯಾನ್ಸರ್ನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಕ್ಯಾನ್ಸರ್ ಪ್ರಕರಣಗಳು ಈಶಾನ್ಯ ರಾಜ್ಯಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನೂ ಸಮಾವೇಶ ದೃಢಪಡಿಸಿದೆ. ಮಿಜೋರಾಂ ರಾಜಧಾನಿಯಲ್ಲಿ ದೇಶದಲ್ಲೇ ಗರಿಷ್ಠ ಪ್ರಮಾಣದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಪುರುಷರಲ್ಲಿ ಪ್ರತಿ 1 ಲಕ್ಷ ಮಂದಿಗೆ 269.4 ಮಂದಿ ಈ ರೋಗಕ್ಕೆ ತುತ್ತಾಗುಅತ್ತಿದ್ದಾರೆ. ಅರುಣಾಚಲ ಪ್ರದೇಶದ ಪಪುಂಪರೆ ಜಿಲ್ಲೆಯಲ್ಲಿ ಗರಿಷ್ಠ ಮಹಿಳಾ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
ಬಹುತೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ಪ್ರತಿ ಲಕ್ಷ ಮಂದಿಯ ಪೈಕಿ 100-110 ಮಂದಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮುಂಬೈನಲ್ಲಿ ಪ್ರತಿ ಲಕ್ಷ ಮಂದಿಯ ಪೈಕಿ 108 ಪುರುಷರು ಹಾಗೂ 116ರಷ್ಟು ಮಹಿಳೆಯರು ಈ ರೋಗದಿಂದ ಬಳಲುತ್ತಿದ್ದಾರೆ. ಈ ಪ್ರಮಾಣ 2001ರಲ್ಲಿ ಇದ್ದ ಪ್ರಮಾಣಷ್ಟಾಗಿದೆ.