ಸಿಎಎ: ಭಾರತೀಯ ಪೌರತ್ವ ಕೋರಲು ಅಗತ್ಯವಾದ ದಾಖಲೆ ಪ್ರಕ್ರಿಯೆ ಸರಳಗೊಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಡಿ ನಿಯಮಗಳ ವ್ಯಾಪ್ತಿಯನ್ನು ವಿಸ್ತರಿಸಿರುವ ಕೇಂದ್ರವು ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು ಭಾರತೀಯ ಪೌರತ್ವವನ್ನು ಕೋರಲು ಅಗತ್ಯವಾದ ದಾಖಲೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಗೃಹ ಸಚಿವಾಲಯವು ಸಿಎಎ ನಿಯಮಗಳ ಅನುಸೂಚಿ- IA ಕುರಿತು ಸ್ಪಷ್ಟನೆಯನ್ನು ಹೊರಡಿಸಿದೆ. ಈ ಅನುಸೂಚಿಯು ಅರ್ಜಿದಾರರು ತಾವು ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಪ್ರಜೆಗಳೆಂದು ಸಾಬೀತುಗೊಳಿಸಲು ಅಗತ್ಯವಾದ 9 ದಾಖಲೆಗಳ ಪಟ್ಟಿಯನ್ನು ಒಳಗೊಂಡಿದೆ. ಜು.8ರಂದು ಪತ್ರದ ಮೂಲಕ ಸ್ಪಷ್ಟೀಕರಣವನ್ನು ಜನಗಣತಿ ನಿರ್ದೇಶನಾಲಯಕ್ಕೆ ತಿಳಿಸಲಾಗಿದೆ.
ಈ ಸ್ಪಷ್ಟೀಕರಣದೊಂದಿಗೆ,ಅರ್ಜಿದಾರರು ಈಗ ತಾವು ಅಥವಾ ತಮ್ಮ ಪೂರ್ವಜರು ಈ ಮೂರು ದೇಶಗಳ ಪ್ರಜೆಗಳಾಗಿದ್ದೇವೆ ಎಂದು ಸಾಬೀತುಗೊಳಿಸಲು ರಾಜ್ಯ ಅಥವಾ ಕೇಂದ್ರ ಸರಕಾರ ಅಥವಾ ಭಾರತದಲ್ಲಿಯ ಯಾವುದೇ ನ್ಯಾಯಾಂಗ ಅಥವಾ ಅರೆ-ನ್ಯಾಯಾಂಗ ಪ್ರಾಧಿಕಾರವು ನೀಡಿರುವ ಯಾವುದೇ ದಾಖಲೆಯನ್ನು ಸಲ್ಲಿಸಬಹುದು.
ಅನುಸೂಚಿ- IAಯಲ್ಲಿಯ ಎಂಟನೇ ನಿಬಂಧನೆಯಡಿ ಯಾವ ರೀತಿಯ ದಾಖಲೆಗಳನ್ನು ತಾವು ಸ್ವೀಕರಿಸಬಹುದು ಎಂಬ ಬಗ್ಗೆ ಸ್ಪಷ್ಟನೆಯನ್ನು ಕೋರಿ ಹಲವಾರು ವಿಚಾರಣೆಗಳನ್ನು ತಾನು ಸ್ವೀಕರಿಸಿದ್ದಾಗಿ ಗೃಹ ಸಚಿವಾಲಯವು ಹೇಳಿದೆ.
ತಮ್ಮ ಪೋಷಕರು,ಅಜ್ಜ-ಅಜ್ಜಿ ಅಥವಾ ಮುತ್ತಜ್ಜ-ಮುತ್ತಜ್ಜಿ ಬಾಂಗ್ಲಾದೇಶ,ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ ಅಥವಾ ಪ್ರಜೆಗಳಾಗಿದ್ದರು ಎಂದು ತೋರಿಸುವ ದಾಖಲೆಗಳನ್ನು ಅರ್ಜಿದಾರರು ಉಲ್ಲೇಖಿಸಬಹುದು ಎಂದು ಎಂಟನೇ ನಿಬಂಧನೆ ಹೇಳುತ್ತದೆ.