ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಿಲ್ಲ: ಅಮಿತ್‌ ಶಾ

Update: 2024-03-14 05:22 GMT

ಕೇಂದ್ರ ಗೃಹ ಸಚಿವ ಅಮಿತ್ ಶಾ (PTI) 

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಎಂದಿಗೂ ಹಿಂಪಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

"ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು, ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎಯನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ" ಎಂದು ANI ಗೆ ನೀಡಿದ ಸಂದರ್ಶನದಲ್ಲಿ ಅಮಿತ್‌ ಶಾ ಹೇಳಿದ್ದಾರೆ.

ಸಿಎಎ ಜಾರಿಗೊಳಿಸುವ ಅಧಿಸೂಚನೆ ಪ್ರಕಟಿಸಿದ ಬಳಿಕ ಸಿಎಎ ವಿರೋಧಿ ಕಾವು ತೀವ್ರವಾಗಿದ್ದು, ಪ್ರತಿಪಕ್ಷಗಳು ಸಿಎಎ ಜಾರಿಗೊಳಿಸುವುದನ್ನು ವಿರೋಧಿಸುತ್ತಿದ್ದಾರೆ.

ತಾವು ಅಧಿಕಾರಕ್ಕೆ ಬಂದರೆ ಕಾನೂನನ್ನು ರದ್ದುಪಡಿಸುವ ಬಗ್ಗೆ INDIA ಮೈತ್ರಿಕೂಟದ ನಾಯಕರ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ, ಅವರು ಅಧಿಕಾರಕ್ಕೆ ಬರುವ ಸಾಧ್ಯತೆಗಳು ಮಂಕಾಗಿದೆ ಎಂದು ವಿರೋಧ ಪಕ್ಷಗಳಿಗೂ ತಿಳಿದಿದೆ ಎಂದು ಹೇಳಿದರು.

“ಭಾರತೀಯ ಮೈತ್ರಿಕೂಟಕ್ಕೂ ತಾನು ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿದೆ, ಸಿಎಎ ಅನ್ನು ಬಿಜೆಪಿ ತಂದಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದನ್ನು ತಂದಿದೆ, ಅದನ್ನು ರದ್ದು ಮಾಡುವುದು ಅಸಾಧ್ಯ, ನಾವು ಅದರ ಬಗ್ಗೆ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸುತ್ತೇವೆ. ಅದನ್ನು ರದ್ದುಪಡಿಸಲು ಬಯಸುವವರಿಗೆ ಸ್ಥಾನ ಸಿಗುವುದಿಲ್ಲ” ಎಂದು ಶಾ ಹೇಳಿದರು.

ವಿವಾದಾತ್ಮಕ ಕಾನೂನಿನ ಮೂಲಕ ಭಾರತೀಯ ಜನತಾ ಪಕ್ಷ ಹೊಸ ವೋಟ್ ಬ್ಯಾಂಕ್ ಸೃಷ್ಟಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಅವರು "ವಿರೋಧ ಪಕ್ಷಗಳಿಗೆ ಬೇರೆ ಕೆಲಸವಿಲ್ಲ.. ಹೇಳೋದು ಒಂದು ಮಾಡುವುದು ಇನ್ನೊಂದು ಎಂಬ ಇತಿಹಾಸ ಅವರದು. ಆದರೆ, ಪ್ರಧಾನಿ ಮೋದಿ ಹಾಗೂ ಬಿಜೆಪಿ ಇತಿಹಾಸವೇ ಬೇರೆ. ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳೋದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ಕೊಟ್ಟ ಪ್ರತಿ ಗ್ಯಾರಂಟಿಯನ್ನು ಅವರು ಈಡೇರಿಸಿದ್ದಾರೆ” ಎಂದು ಶಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News