ಕೆನಡಾ ಸಿಕ್ಖ್ ಮುಖಂಡನ ಹತ್ಯೆಗೆ ಭಾರತೀಯ ನಂಟು ಆರೋಪದ ಬಗ್ಗೆ ತನಿಖೆ: ಕೆನಡಾ ಪ್ರಧಾನಿ
ಹೊಸದಿಲ್ಲಿ: ಬ್ರಿಟಿಷ್ ಕೊಲಂಬಿಯಾದಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದ ಖಲಿಸ್ತಾನ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮತ್ತು ಭಾರತ ಸರ್ಕಾರದ ಏಜೆಂಟರ ಸಂಬಂಧದ ಬಗ್ಗೆ ಕೆನಡಾ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎಂದು ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೋ ಸೋಮವಾರ ಹೌಸ್ ಆಫ್ ಕಾಮನ್ಸ್ ನಲ್ಲಿ ಹೇಳಿಕೆ ನೀಡಿದ್ದಾರೆ.
ಈ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವ ಮೆಲನಿ ಜೋಲಿ ಅವರು, ಉನ್ನತ ಶ್ರೇಣಿಯ ಭಾರತೀಯ ರಾಜತಾಂತ್ರಿಕರೊಬ್ಬರನ್ನು ಉಚ್ಚಾಟಿಸಿದ್ದಾರೆ.
ಈ ಆರೋಪಗಳಿಗೆ ಭಾರತ ಸರ್ಕಾರ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ಆರೋಪ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗುವ ಸಾಧ್ಯತೆ ಇದೆ. ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಎರಡು ದೇಶಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ.
"ಈ ಘಟನೆ ಹಿನ್ನೆಲೆಯಲ್ಲಿ ಕೆನಡಾದಲ್ಲಿರುವ ಭಾರತೀಯ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಉಚ್ಚಾಟಿಸಲಾಗಿದೆ. ಇದು ಸತ್ಯ ಎಂದು ಸಾಬೀತಾದಲ್ಲಿ ಇದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆ ಹಾಗೂ ಪರಸ್ಪರ ದೇಶಗಳು ಹೇಗೆ ವ್ಯವಹರಿಸಬೇಕು ಎಂಬ ಮೂಲ ನಿಯಮಾವಳಿಯ ಉಲ್ಲಂಘನೆ ಎನಿಸಲಿದೆ ಎಂದು ಜೋಲಿ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಲು ಕೆನಡಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಕೆನಡಾದ ಗುಪ್ತಚರ ಸೇವೆಗಳ ವಿಭಾಗದ ಮುಖ್ಯಸ್ಥರು ಭಾರತ ಪ್ರವಾಸ ಕೈಗೊಂಡಿದ್ದಾರೆ ಎಂದು ಸಾರ್ವಜನಿಕ ಸುರಕ್ಷೆ ಖಾತೆ ಸಚಿವ ಡೊಮಿನಿಕ್ ಲಿಬ್ಲಾಂಕ್ ಹೇಳಿದ್ದಾರೆ.