ನೀಟ್ ಪರೀಕ್ಷೆ ರದ್ದು ಮಾಡಿದರೆ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ತನಿಖೆ ಹಾಗೂ ದೇಶ ವ್ಯಾಪಿ ಚರ್ಚೆ ನಡೆಯುತ್ತಿರುವ ಹೊರತಾಗಿಯೂ ನೀಟ್ (ಎನ್‌ಇಇಟಿ) ಅನ್ನು ರದ್ದು ಮಾಡದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಮಾತ್ರ ಪರಿಣಾಮ ಬೀರಿದೆ. 2004 ಹಾಗೂ 2015ರ ಘಟನೆಗಳಿಗೆ ಹೋಲಿಸಿದರೆ, ಈ ಘಟನೆ ತೀವ್ರ ವ್ಯತಿರಿಕ್ತವಾಗಿದೆ. ಆಗ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಯು ಪರೀಕ್ಷೆ ರದ್ಧತಿಗೆ ಕಾರಣವಾಯಿತು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನೀಟ್ ಪರೀಕ್ಷೆಯನ್ನು ರದ್ದು ಮಾಡಿದರೆ, ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆದುದರಿಂದ ನೀಟ್ ಪರೀಕ್ಷೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನ್ ಶನಿವಾರ ಹೇಳಿದ್ದಾರೆ.
ನೀಟ್ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಪು ಅಂತಿಮವಾಗಿರಲಿದೆ ಎಂದು ಸಚಿವರು ಹೇಳಿದ್ದಾರೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳನ್ನು ತಡೆಯುವ ಗುರಿಯನ್ನು ಹೊಂದಿರುವ ಕಠಿಣ ಕಾನೂನನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಈ ಹೊಸ ಕಾನೂನು ಜೂನ್ 21ರಿಂದಲೇ ಜಾರಿಗೆ ಬಂದಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇದಕ್ಕೆ, ಯುಜಿಸಿ-ನೆಟ್ ಪರೀಕ್ಷೆಗಳಿಗೆ ಸಂಬಂಧಿಸಿ ಅಕ್ರಮದ ವಿರುದ್ಧ ಪರೀಕ್ಷೆ ಆಕಾಂಕ್ಷಿಗಳು, ವಿದ್ಯಾರ್ಥಿ ಒಕ್ಕೂಟಗಳು ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ನಡುವೆ ಈ ಕಾನೂನು ಜಾರಿಗೆ ಬಂದಿದೆ.