ಅಪಘಾತ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆ ಯೋಜನೆ: ವಿಳಂಬಕ್ಕಾಗಿ ಮೋದಿ ಸರಕಾರಕ್ಕೆ ಸುಪ್ರೀಂ ತರಾಟೆ

ಸುಪ್ರೀಂ | PTI
ಹೊಸದಿಲ್ಲಿ: ವಾಹನ ಅಪಘಾತಗಳ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯನ್ನು ರೂಪಿಸುವಲ್ಲಿ ವಿಳಂಬಕ್ಕಾಗಿ ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಈ ಬಗ್ಗೆ ವಿವರಣೆ ನೀಡುವಂತೆ ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಗೆ ಸಮನ್ಸ್ ಹೊರಡಿಸಿದೆ.
ತಾನು ಜ.8ರಂದೇ ಆದೇಶವನ್ನು ಹೊರಡಿಸಿದ್ದರೂ ಕೇಂದ್ರವು ಅದನ್ನು ಪಾಲಿಸದ್ದಕ್ಕಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ ಎಸ್.ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು, ‘ನೀಡಲಾಗಿದ್ದ ಗಡುವು ಮಾ.15,2025ರಂದು ಅಂತ್ಯಗೊಂಡಿದೆ. ಇದು ನ್ಯಾಯಾಲಯದ ಆದೇಶಗಳ ಮಾತ್ರವಲ್ಲ, ಅತ್ಯಂತ ಪ್ರಯೋಜನಕಾರಿ ಶಾಸನದ ಅನುಷ್ಠಾನದಲ್ಲಿಯೂ ಅತ್ಯಂತ ಗಂಭೀರ ಉಲ್ಲಂಘನೆಯಾಗಿದೆ. ಎ.28ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಮತ್ತು ಈ ನ್ಯಾಯಾಲಯದ ನಿರ್ದೇಶನಗಳನ್ನು ಏಕೆ ಪಾಲಿಸಲಾಗಿಲ್ಲ ಎನ್ನುವುದನ್ನು ವಿವರಿಸುವಂತೆ ನಾವು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳಿಗೆ ಆದೇಶಿಸುತ್ತಿದ್ದೇವೆ ’ ಎಂದು ತಿಳಿಸಿತು.
ಉನ್ನತ ಸರಕಾರಿ ಅಧಿಕಾರಿಗಳನ್ನು ಇಲ್ಲಿಗೆ ಕರೆಸಿದರೆ ಮಾತ್ರ ಅವರು ನ್ಯಾಯಾಲಯದ ಆದೇಶಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದೂ ಪೀಠವು ಕುಟುಕಿತು.
ಕೆಲವು ಸಮಸ್ಯೆಗಳಿವೆ ಎಂದು ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು ನಿವೇದಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಇದು ನಿಮ್ಮದೇ ಕಾನೂನು. ನಗದುರಹಿತ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ ಜನರು ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಜನರ ಅನುಕೂಲಕ್ಕಾಗಿ. ನ್ಯಾಯಾಂಗ ನಿಂದನೆಗಾಗಿ ನಾವು ನಿಮ್ಮ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಇಲ್ಲಿ ಬಂದು ವಿವರಣೆ ನೀಡುವಂತೆ ನಿಮ್ಮ ಕಾರ್ಯದರ್ಶಿಗೆ ಸೂಚಿಸಿ’ ಎಂದು ಹೇಳಿತು.
ಕಾನೂನಿನಡಿ ಕಡ್ಡಾಯಗೊಳಿಸಲಾಗಿರುವ ‘ಗೋಲ್ಡನ್ ಅವರ್ ’ ಅವಧಿಯಲ್ಲಿ ವಾಹನ ಅಪಘಾತಗಳ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಾಗಿ ಯೋಜನೆಯನ್ನು ಮಾ.14ರೊಳಗೆ ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯವು ಜ.8ರಂದು ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು.
ಮೋಟರ್ ವಾಹನಗಳ ಕಾಯ್ದೆ,1988ರ ಕಲಂ 162(2)ರಲ್ಲಿ ವ್ಯಾಖ್ಯಾನಿಸಲಾಗಿರುವ ‘ಗೋಲ್ಡನ್ ಅವರ್’ ಮಾರಣಾಂತಿಕ ಗಾಯದ ನಂತರದ ಒಂದು ಗಂಟೆಯ ಅವಧಿಯನ್ನು ಸೂಚಿಸುತ್ತದೆ,ಈ ಅವಧಿಯಲ್ಲಿ ಸಕಾಲಿಕ ವೈದ್ಯಕೀಯ ನೆರವು ಸಾವನ್ನು ತಡೆಯುವ ಹೆಚ್ಚಿನ ಸಾಧ್ಯತೆಯಿರುತ್ತದೆ.