ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಜಾತಿ ಗಣತಿ ಅಗತ್ಯ: ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈ: ದೇಶವ್ಯಾಪಿ ಜಾತಿ ಗಣತಿಯನ್ನು ನಡೆಸಬೇಕು ಎಂಬ ತಮ್ಮ ಪಕ್ಷದ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಾಮಾಜಿಕ ನ್ಯಾಯವನ್ನು ಸೂಕ್ತವಾಗಿ ಅನುಷ್ಠಾನಗೊಳಿಸಲು ಜಾತಿ ಗಣತಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಸೋಮವಾರ ಚೆನ್ನೈನಲ್ಲಿ ಆಯೋಜನೆಗೊಂಡಿದ್ದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸರ್ಕಾರಿ ಉದ್ಯೋಗಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಜಾತಿ ಆಧಾರಿತ ಮೀಸಲಾತಿಯನ್ನು ಖಾತ್ರಿಗೊಳಿಸಲು ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಿದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಪುಣ್ಯ ತಿಥಿಯನ್ನು ಆಚರಿಸುತ್ತಿದ್ದೇವೆ. ಸಾಮಾಜಿಕ ನ್ಯಾಯ ಕೇವಲ ಒಂದು ರಾಜ್ಯದ ಕಾಳಜಿಯಲ್ಲ; ಎಲ್ಲ ರಾಜ್ಯಗಳ ಕಾಳಜಿ. ಪ್ರತಿ ರಾಜ್ಯದಲ್ಲೂ ಜಾತಿ ಮತ್ತು ವರ್ಗಗಳ ನಡುವೆ ಏರುಪೇರಿರಬಹುದಾದರೂ, ಅವರೆಲ್ಲರೂ ಅಂಚಿಗೆ ತಳ್ಳಲ್ಪಟ್ಟಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಎಲ್ಲೆಲ್ಲಿ ಅಂಚಿಗೆ ದೂಡುವುದು, ವರ್ಗೀಕರಣ, ಅಸ್ಪೃಶ್ಯತೆ ಹಾಗೂ ಗುಲಾಮಗಿರಿ ಇರುತ್ತದೊ, ಅವಕ್ಕೆಲ್ಲ ಸಾಮಾಜಿಕ ನ್ಯಾಯವೊಂದೇ ಮದ್ದು. ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಹಲವಾರು ಅಡೆತಡೆಗಳಿವೆ. ಅವನ್ನು ಬದಲಿಸಲು ಕೇಂದ್ರ ಸರ್ಕಾರವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಜನಗಣತಿ ಹಾಗೂ ಜಾತಿ ಗಣತಿಯನ್ನು ಹಮ್ಮಿಕೊಳ್ಳಬೇಕಿದೆ” ಎಂದು ಅವರು ಆಗ್ರಹಿಸಿದ್ದಾರೆ.
“ವಿ.ಪಿ.ಸಿಂಗ್ ಹಲವಾರು ತಲೆಮಾರುಗಳ ಕಾಲ ಅಂಚಿಗೆ ತಳ್ಳಲ್ಪಟ್ಟಿದ್ದ ಸಮುದಾಯಗಳಿಗೆ ಬಾಗಿಲು ತೆರೆದರು. ಅದರಿಂದಾಗಿ ಅವರ ಪ್ರಧಾನಿ ಹುದ್ದೆಗೇ ಚ್ಯುತಿ ಬಂದರೂ, ಅವರದನ್ನು ಮಾಡಲು ದೃಢ ನಿಶ್ಚಯ ಮಾಡಿದ್ದರು. ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವುದು ಈ ದ್ರಾವಿಡ ಮಾದರಿಯ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ” ಎಂದೂ ಸ್ಟಾಲಿನ್ ಹೇಳಿದ್ದಾರೆ.
ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿ.ಪಿ.ಸಿಂಗ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ವಿ.ಪಿ.ಸಿಂಗ್ ಅವರ ಪತ್ನಿ ಸೀತಾ ಕುಮಾರಿ ಹಾಗೂ ಅವರ ಪುತ್ರ ಅಭಯ್ ಸಿಂಗ್, ಸಂಸದೆ ಹಾಗೂ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕನಿಮೋಳಿ, ಯುವಜನ ಕಲ್ಯಾಣ ಹಾಗೂ ಕ್ರೀಡಾಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ಜಲಸಂಪನ್ಮೂಲ ಸಚಿವ ದುರೈಮುರುಗನ್ ಹಾಗೂ ಸಂಸದ ದಯಾನಿಧಿ ಮಾರನ್ ಉಪಸ್ಥಿತರಿದ್ದರು.