ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ: ಹರ್ಷ ಮಂದರ್ ನಿವಾಸದ ಮೇಲೆ ಸಿಬಿಐ ದಾಳಿ
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರದ ವಿರುದ್ಧ ವಿಮರ್ಶಾತ್ಮಕ ನಿಲುವು ಹೊಂದಿದ್ದುದರಿಂದ ಹರ್ಷ ಮಂದರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಬರೆದಿದ್ದಾರೆ.
“ಹರ್ಷ ಮಂದರ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ. ಹರ್ಷ ಮಂದರ್ ಅತ್ಯಂತ ವಿನಯದ, ಮಾನವೀಯ ಹಾಗೂ ಉದಾರ ವ್ಯಕ್ತಿತ್ವದ ಹೋರಾಟಗಾರ. ಅವರು ದುರ್ಬಲ ಹಾಗೂ ಬಡವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎಲ್ಲ ತನಿಖಾ ಸಂಸ್ಥೆಗಳೂ ಅದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಂಡಿವೆ. ತನ್ನನ್ನು ಟೀಕಿಸುವವರ ವಿರುದ್ಧ ಸರ್ಕಾರವು ನಿರ್ದಯವಾಗಿ ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ” ಎಂದು ಕಿಡಿ ಕಾರಿದ್ದಾರೆ.