ಸಿಬಿಎಸ್ಇ ವಿದ್ಯಾರ್ಥಿಗಳು ಈಗ 22 ಭಾಷೆಗಳಲ್ಲಿ ಕಲಿಯಬಹುದು: ಕೇಂದ್ರ ಶಿಕ್ಷಣ ಸಚಿವ

Update: 2023-07-23 15:55 GMT

ಸಾಂದರ್ಭಿಕ ಚಿತ್ರ | Photo: PTI

ಭುವನೇಶ್ವರ: ಇನ್ನು ಮುಂದೆ ದೇಶಾದ್ಯಂತ ಸಿಬಿಎಸ್ಇ ಶಾಲೆಗಳಲ್ಲಿ 22 ಭಾಷೆಗಳಲ್ಲಿ ಬೋಧನೆಯನ್ನು ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರವಿವಾರ ಇಲ್ಲಿ ತಿಳಿಸಿದರು.

ಈವರೆಗೆ ಸಿಬಿಎಸ್ಇ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಬೋಧನಾ ಮಾಧ್ಯಮಗಳಾಗಿದ್ದವು.

ಈ ಸಂಬಂಧ ಸಿಬಿಎಸ್ಇ ಶುಕ್ರವಾರ ಸುತ್ತೋಲೆಯನ್ನು ಹೊರಡಿಸಿದ್ದು,ತನ್ನ ಶಾಲೆಗಳಲ್ಲಿ ಬೋಧನಾ ಮಾಧ್ಯಮಗಳಾಗಿ ಇತರ ಭಾಷೆಗಳಿಗೆ ಅವಕಾಶ ಕಲ್ಪಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ನಿಬಂಧನೆಗಳಡಿ 1ರಿಂದ 12ನೇ ತರಗತಿವರೆಗೆ ನೂತನ ಬೋಧನಾ ಮಾಧ್ಯಮಗಳನ್ನು ಸೇರಿಸಲಾಗಿದೆ ಎಂದು ಪ್ರಧಾನ ತಿಳಿಸಿದರು.

ತಮ್ಮ ಮಾತೃಭಾಷೆಗಳಲ್ಲಿ ಓದುವ ವಿದ್ಯಾರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ಗಿಂತ ಚೆನ್ನಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ ಅವರು,ವಿದ್ಯಾರ್ಥಿಗಳು ತಮ್ಮ ಭಾಷೆಗಳಲ್ಲಿ ವ್ಯಾಸಂಗ ಮಾಡಲು ಶಾಲೆಗಳು ಅವಕಾಶವನ್ನು ಕಲ್ಪಿಸಲಿವೆ ಮತ್ತು ಅದರಂತೆ ಪಠ್ಯಪುಸ್ತಕಗಳನ್ನು ಸಿದ್ಧಗೊಳಿಸಲು ಎನ್ಸಿಇಆರ್ಟಿಗೂ ಸೂಚನೆ ನೀಡಲಾಗಿದೆ.

ಈ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲೂ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು. ತಮ್ಮ ಮಾತೃಭಾಷೆಗಳಲ್ಲಿ ಕಲಿಯುವುದರಿಂದ ಯಾವುದೇ ವಿಷಯದಲ್ಲಿ ಸ್ಪಷ್ಟತೆಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ,ಆದ್ದರಿಂದ ಎನ್ಇಪಿಯು ಎಲ್ಲ ಭಾರತೀಯ ಭಾಷೆಗಳಿಗೆ ಪ್ರಾಧಾನ್ಯ ನೀಡುತ್ತದೆ ಎಂದು ಪ್ರಧಾನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News