ಸೆಪ್ಟಂಬರ್‌ನಿಂದ ಜನಗಣತಿ ಆರಂಭಗೊಳ್ಳುವ ಸಾಧ್ಯತೆ

Update: 2024-08-22 14:52 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ವರ್ಷಗಳ ಟೀಕೆಗಳ ಬಳಿಕ ತನ್ನ ಮೂರನೇ ಅಧಿಕಾರಾವಧಿಯಲ್ಲಿ ಪ್ರಮುಖ ದತ್ತಾಂಶ ಕೊರತೆಗಳನ್ನು ನಿವಾರಿಸುವ ಬಗ್ಗೆ ಗಮನ ಹರಿಸಿದ್ದು,ಈಗಾಗಲೇ ವಿಳಂಬಗೊಂಡಿರುವ ಜನಗಣತಿಯು ಸೆಪ್ಟಂಬರ್‌ನಿಂದ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರದಲ್ಲಿಯ ಮೂಲಗಳು ತಿಳಿಸಿವೆ.

ಭಾರತದ ದಶವಾರ್ಷಿಕ ಜನಗಣತಿಯು 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬಗೊಂಡಿದೆ. ಮುಂದಿನ ತಿಂಗಳು ಆರಂಭಗೊಳ್ಳುವ ಜನಗಣತಿ ಪೂರ್ಣಗೊಳ್ಳಲು 18 ತಿಂಗಳುಗಳನ್ನು ತೆಗೆದುಕೊಳ್ಳಲಿದೆ ಎಂದು ಈ ವಿಷಯದಲ್ಲಿ ನೇರವಾಗಿ ಭಾಗಿಯಾಗಿರುವ ಎರಡು ಸರಕಾರಿ ಮೂಲಗಳು ಹೇಳಿವೆ.

ಜನಗಣತಿಯಲ್ಲಿ ನಡೆಸುವಲ್ಲಿ ವಿಳಂಬವನ್ನು ಟೀಕಿಸಿರುವ ಸರಕಾರದ ಒಳಗಿನ ಮತ್ತು ಹೊರಗಿನ ಅರ್ಥಶಾಸ್ತ್ರಜ್ಞರು,ಈ ವಿಳಂಬವು ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗ ಅಂದಾಜುಗಳು ಸೇರಿದಂತೆ ಹಲವಾರು ಅಂಕಿಸಂಖ್ಯಾ ಸಮೀಕ್ಷೆಗಳ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಈ ಹೆಚ್ಚುವರಿ ದತ್ತಾಂಶಗಳು ಮತ್ತು ಸರಕಾರಿ ಯೋಜನೆಗಳು 2011ರಲ್ಲಿ ನಡೆದಿದ್ದ ಕೊನೆಯ ಜನಗಣತಿಯ ಅಂಕಿ ಅಂಶಗಳನ್ನು ಆಧರಿಸಿವೆ.

ಜನಗಣತಿಯನ್ನು ನಡೆಸುವಲ್ಲಿ ಮುಂಚೂಣಿಯ ಪಾತ್ರವನ್ನು ನಿರ್ವಹಿಸುವ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯ ಜನಗಣತಿಗಾಗಿ ವೇಳಾಪಟ್ಟಿಯನ್ನು ಸಿದ್ಧಗೊಳಿಸಿದ್ದು,ಮಾರ್ಚ್ 2026ರ ವೇಳೆಗೆ 15 ವರ್ಷಗಳ ಅವಧಿಯ ಜನಗಣತಿ ಫಲಿತಾಂಶಗಳನ್ನು ಬಿಡುಗಡೆಗೊಳಿಸಲು ಉದ್ದೇಶಿಸಿವೆ ಎಂದು ತಿಳಿಸಿರುವ ಅಧಿಕಾರಿಗಳು,ಜನಗಣತಿ ಪ್ರಕ್ರಿಯೆಯನ್ನು ಆರಂಭಿಸಲು ಪ್ರಧಾನಿ ಮೋದಿಯವರ ಕಚೇರಿಯಿಂದ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.

ಕಳೆದ ವರ್ಷ ವಿಶ್ವಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯಂತೆ, ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.

►ಒಬಿಸಿಗಳ ಜಾತಿವಾರು ಮಾಹಿತಿ ಸಂಗ್ರಹಕ್ಕೆ ಕಾಂಗ್ರೆಸ್ ಸಲಹೆ

1951ರಿಂದಲೂ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಜನಸಂಖ್ಯೆಯ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ,ಹೀಗಾಗಿ ಮುಂಬರುವ ಜನಗಣತಿಯ ಪ್ರಶ್ನಾವಳಿಯಲ್ಲಿ ಕೇವಲ ಒಂದು ಕಾಲಮನ್ನು ಹೆಚ್ಚುವರಿಯಾಗಿ ಸೇರಿಸುವ ಮೂಲಕ ಸರಕಾರವು ಒಬಿಸಿ ಜನಸಂಖ್ಯೆಯ ಜಾತಿವಾರು ದತ್ತಾಂಶಗಳನ್ನು ಸಂಗ್ರಹಿಸಬಹುದು ಎಂದು ಕಾಂಗ್ರೆಸ್ ಗುರುವಾರ ಸಲಹೆ ನೀಡಿದೆ. ಇಂತಹ ಕ್ರಮವು ಸಕಾರಾತ್ಮಕ ಕ್ರಿಯಾ ಯೋಜನೆಗಳಿಗೆ ಇನ್ನಷ್ಟು ಭದ್ರಬುನಾದಿಯನ್ನು ಒದಗಿಸುತ್ತದೆ ಎಂದು ಅದು ಹೇಳಿದೆ.

ಎಕ್ಸ್ ಪೋಸ್ಟ್‌ನಲ್ಲಿ ಈ ಸಲಹೆಯನ್ನು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮುಂದಿನ ಜನಗಣತಿಯನ್ನು ನಡೆಸುವ ಬಗ್ಗೆ ಕೇಂದ್ರ ಸರಕಾರವು ಇನ್ನಷ್ಟೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಆದರೆ ಜಾತಿ ಎಣಿಕೆಯನ್ನು ಸೇರಿಸಲು ದತ್ತಾಂಶ ಸಂಗ್ರಹವನ್ನು ವಿಸ್ತರಿಸುವ ಬಗ್ಗೆ ಸಕ್ರಿಯ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

2021ರ ಜನಗಣತಿಯನ್ನು ನಡೆಸುವಲ್ಲಿ ನಿರಂತರ ವೈಫಲ್ಯದಿಂದಾಗಿ ಆರ್ಥಿಕ ಯೋಜನೆ ಮತ್ತು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳಿಗೆ ಅಗತ್ಯವಾದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಅರ್ಹ ಎಷ್ಟೋ ಜನರು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಲಾಭಗಳನ್ನು ಪಡಯಲಾಗಿಲ್ಲ. ಉದಾಹರಣೆಗೆ 12 ಕೋಟಿಗೂ ಅಧಿಕ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013 ಅಥವಾ ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ತಮಗೆ ಸಿಗಬೇಕಿದ್ದ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ ಎಂದೂ ರಮೇಶ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News