ಹಲವು ವರ್ಷಗಳ ವಿಳಂಬದ ಬಳಿಕ 2025ರಲ್ಲಿ ಜನಗಣತಿ ಪ್ರಾರಂಭ
ಹೊಸದಿಲ್ಲಿ: ಹಲವು ವರ್ಷಗಳ ವಿಳಂಬದ ಬಳಿಕ ಮುಂದಿನ ವರ್ಷ ಭಾರತದ ಜನಗಣತಿ ನಡೆಯಲಿದೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ, ಸಂಭಾವ್ಯ ಜಾತಿ ಗಣತಿಯ ಆಗ್ರಹಗಳು ಮತ್ತು ಹೆಚ್ಚುತ್ತಿರುವ ರಾಜಕೀಯ ಸಂಘರ್ಷದ ನಡುವೆ ನಡೆಯಲಿರುವ ಗಣತಿಗೆ ವಿಶೇಷ ಮಹತ್ವ ಬಂದಿದೆ.
ಸುಧೀರ್ಘ ಕಾಲದಿಂದ ವಿಳಂಬವಾಗಿರುವ ಜನಗಣತಿಯನ್ನು ಮುಂದಿನ ವರ್ಷ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 1872ರಿಂದ ನಿರಂತರವಾಗಿ ಪ್ರತಿ 10 ವರ್ಷಕ್ಕೆ ಒಂದು ಬಾರಿ ನಡೆಯುತ್ತಿದ್ದ ಗಣತಿ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆರಂಭವಾಗಿರಲಿಲ್ಲ.
ಈ ದಶಕದ ಗಣತಿ ಅತ್ಯಂತ ಮಹತ್ವದ್ದು ಎನಿಸಿದ್ದು, 2026ರ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಉತ್ತರ ಭಾರತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಬಡತನವೂ ಅಧಿಕವಾಗಿದೆ. ಈ ಕಾರಣದಿಂದ ಸಂಸತ್ತಿನಲ್ಲಿ ಅಧಿಕ ಪ್ರಾತಿನಿಧ್ಯ ಪಡೆಯಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಪುನರ್ ವಿಂಗಡಣೆ ಅನಿವಾರ್ಯವಾಗಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಪ್ರಾಂತ್ಯಗಳು ಹೆಚ್ಚು ಸಮೃದ್ಧ ಹಾಗೂ ಜನನ ದರ ಕೂಡಾ ಇಲ್ಲಿ ಕಡಿಮೆ.
1951ರಿಂದ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದ್ದರೂ, ಸಾಂಕ್ರಾಮಿಕದ ಕಾರಣದಿಂದ 2021ರಲ್ಲಿ ಆರಂಭವಾಗಲಿರಲಿಲ್ಲ. ಮುಂದಿನ ವೇಳಾಪಟ್ಟಿಯನ್ನು ಸದ್ಯದಲ್ಲಿ ಬಿಡುಗಡೆ ಮಾಡಲಾಗುವುದು. ಮುಂದಿನ ವರ್ಷ ಪ್ರಕ್ರಿಯೆ ಆರಂಭವಾಗಲಿದ್ದು, 2026ರ ವೇಳೆಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.