ಕೇಂದ್ರ ಬಜೆಟ್: ಕಂಪೆನಿಗಳ ಲಾಭ ನುಂಗಿಹಾಕುವ ತೆರಿಗೆ ಏರಿಕೆ!
ಹೊಸದಿಲ್ಲಿ: ಹೂಡಿಕೆಯಿಂದ ಬರುವ ಲಾಭಕ್ಕೆ ಸಂಬಂಧಿಸಿದಂತೆ ಹಲವು ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿರುವ ಬಗ್ಗೆ ಹೂಡಿಕೆದಾರರು ತೀವ್ರ ಅಸಂತೋಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಈ ಪ್ರಸ್ತಾವ ಮಾಡಲಾಗಿದೆ.
ಮೊಟ್ಟಮೊದಲನೆಯದಾಗಿ ಈಕ್ವಿಟಿ ಷೇರುಗಳು ಮತ್ತು ಈಕ್ವಿಟಿ ಕೇಂದ್ರಿತ ಮ್ಯೂಚುವಲ್ ಫಂಡ್ ಗಳಿಂದ ಬರುವ ಅಲ್ಪಾವಧಿ ಹೂಡಿಕೆ ಪ್ರಯೋಜನದ ಮೇಲೆ ಈ ಹಿಂದೆ ಇದ್ದ ತೆರಿಗೆಯನ್ನು ಶೇಕಡ 15 ರಿಂದ 20ಕ್ಕೆ ಹೆಚ್ಚಿಸಲಾಗಿದೆ.
ಇತರ ಆಸ್ತಿಗಳಿಂದ ಅಂದರೆ ಚಿನ್ನಾಭರಣ ಅಥವಾ ಮನೆ ತೆರಿಗೆಯಿಂದ ಬರು ಲಾಭಕ್ಕೆ ಅನ್ವಯವಾಗುವ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಹೊಸ ವ್ಯವಸ್ಥೆಯಡಿ ಗರಿಷ್ಠ ತೆರಿಗೆ ಪ್ರಮಾಣವನ್ನು ಶೇಕಡ 39 ರಿಂದ 42.7ಕ್ಕೆ ಹೆಚ್ಚಿಸಲಾಗಿದೆ.
ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳು ಮತ್ತು ಈಕ್ವಿಟಿ ಕೇಂದ್ರಿತ ಮ್ಯೂಚುವಲ್ ಫಂಡ್ ಗಳ ಮೇಲಿನ ಧೀರ್ಘಾವಧಿ ಬಂಡವಾಳ ಲಾಭವನ್ನು ಹಾಲಿ ಇರುವ ಶೇಕಡ 10 ರಿಂದ 12.5ಕ್ಕೆ ಹೆಚ್ಚಿಸಲಾಗಿದೆ. ಆದರೆ ತೆರಿಗೆ ಪಾವತಿಸಬೇಕಾದ ಧೀರ್ಘಾವಧಿ ಬಂಡವಾಳ ಲಾಭದ ಮೇಲಿನ ವಿನಾಯ್ತಿಯನ್ನು 1 ಲಕ್ಷದಿಂದ 1.25 ಲಕ್ಷ ರೂಪಾಯಿಗೆ ಏರಿಸಲಾಗಿದೆ.
ಧೀರ್ಘಾವಧಿ ಬಂಡವಾಳ ಆಸ್ತಿಗೆ ಅರ್ಹತೆ ಪಡೆಯಲು, ಒಂದು ಮನೆಯನ್ನು ಇಟ್ಟುಕೊಳ್ಳುವ ಹಾಗೂ ಲಿಸ್ಟ್ ಮಾಡದ ಷೇರುಗಳು ಇಲ್ಲವೇ ವಿದೇಶಿ ಸೆಕ್ಯುರಿಟಿಗಳನ್ನು ಇಟ್ಟುಕೊಳ್ಳಬೇಕಾದ ಅವಧಿಯನ್ನು ಎರಡು ವರ್ಷದಲ್ಲೇ ಉಳಿಸಲಾಗಿದೆ. ಆದರೆ ಚಿನ್ನಾಭರಣದಂಥ ಇತರ ಕೆಲ ಆಸ್ತಿಗಳಿಗೆ ಈ ಅವಧಿಯನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಸಲಾಗಿದೆ.