ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ CRPF ಭದ್ರತೆಯನ್ನು ಹಿಂಪಡೆಯಲು ಮುಂದಾದ ಕೇಂದ್ರ ಸರಕಾರ

Update: 2024-09-24 14:55 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ : 2019ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶದನ್ವಯ 2017ರ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಒದಗಿಸಲಾಗಿದ್ದ CRPF ಭದ್ರತೆಯನ್ನು ಹಿಂಪಡೆಯುವುದಾಗಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ಅತ್ಯಾಚಾರ ಸಂತ್ರಸ್ತೆಗೆ ನೋಟಿಸ್ ಜಾರಿಗೊಳಿಸಿದೆ.

2017ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಬಿಜೆಪಿಯ ಉಚ್ಛಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಜೀವಾವಧಿ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಅಮಾನುಷ ಅತ್ಯಾಚಾರ ಪ್ರಕರಣದಲ್ಲಿ ಪ್ರಾಣ ಬೆದರಿಕೆಗೆ ಒಳಗಾಗಿರುವ ಅತ್ಯಾಚಾರ ಸಂತ್ರಸ್ತೆ, ಆಕೆಯ ತಾಯಿ, ಇನ್ನಿತರ ಕುಟುಂಬದ ಸದಸ್ಯರು ಹಾಗೂ ಆಕೆಯ ವಕೀಲರಿಗೆ CRPF ಭದ್ರತೆಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 1, 2019ರಲ್ಲಿ ಆದೇಶಿಸಿತ್ತು.

ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯನ್ನು ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಸದಸ್ಯರಿಗೆ ಒದಗಿಸಬೇಕು ಎಂದು ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವು ಸೂಚಿಸಿತು. ಅತ್ಯಾಚಾರ ಸಂತ್ರಸ್ತೆ ಹಾಗೂ ಕುಟುಂಬದ ಸದಸ್ಯರಿಗೆ ಯಾವುದೇ ಬೆದರಿಕೆ ಇರುವುದು ಕಂಡು ಬಾರದೆ ಇರುವುದರಿಂದ, ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಬಯಸುವುದಾಗಿಯೂ ಹೇಳಿತು.

ಅದಕ್ಕೆ ಪ್ರತಿಯಾಗಿ, ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಸದಸ್ಯರ ವಿಶ್ಲೇಷಣೆಯ ಪ್ರಕಾರ, ಸಂತ್ರಸ್ತೆಗೆ ಯಾವುದೇ ಭದ್ರತೆಯ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News