ಟ್ರಕ್ ಗಳಿಗೆ LNG ಇಂಧನ ಬಳಕೆ | ಏರುತ್ತಿರುವ ಡೀಸೆಲ್ ಬೇಡಿಕೆ ತಗ್ಗಿಸಲು ಕೇಂದ್ರ ಸರಕಾರದ ಚಿಂತನೆ
ಹೊಸದಿಲ್ಲಿ: ಏರುತ್ತಿರುವ ಡೀಸೆಲ್ ಬೇಡಿಕೆ ತಗ್ಗಿಸಲು ಕೇಂದ್ರ ಸರಕಾರವು ಟ್ರಕ್ ಗಳಿಗೆ LNG ಇಂಧನ (ದ್ರವೀಕೃತ ನೈಸರ್ಗಿಕ ಅನಿಲ)ಬಳಸಲು ಚಿಂತನೆ ನಡೆಸಿದೆ.
ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿರುವ ಟ್ರಕ್ ವಲಯದಲ್ಲಿರುವ ಮೂರನೇ ಒಂದು ಭಾಗದ ಟ್ರಕ್ ಗಳಿಗೆ LNG ಇಂಧನ ಬಳಸಲು ಉತ್ತೇಜಿಸುವ ಯೋಜನೆ ಕೇಂದ್ರ ತೈಲ ಸಚಿವಾಲಯದ ಕರಡು ನೀತಿಯಲ್ಲಿದೆ.
ಸಾರಿಗೆ ವಲಯದಲ್ಲಿ ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು, ಹೆವಿ ಡ್ಯೂಟಿ ವಾಹನಗಳಲ್ಲಿ LNG ಯನ್ನು ಉತ್ತೇಜಿಸುವ ಅವಶ್ಯಕತೆಯಿದೆ. LNGಯು ಡೀಸೆಲ್‌ಗಿಂತ ಶೇಕಡಾ 24 ರಷ್ಟು ಕಡಿಮೆ ವಾಯುಮಾಲಿನ್ಯ ಹೊರಸೂಸುತ್ತದೆ ಎಂದು ಕರಡು ಹೇಳಿದೆ.
ಹಸಿರುಮನೆ ಅನಿಲಗಳ ಅತಿದೊಡ್ಡ ಹೊರಸೂಸುವ ದೇಶಗಳಲ್ಲಿ ಒಂದಾದ ಭಾರತವು 2070 ರ ವೇಳೆಗೆ ತನ್ನ ಸ್ಥಾನವನ್ನು ಶೂನ್ಯ ಬಳಕೆಗೆ ತಂದು ನಿಲ್ಲಿಸುವ ಯೋಜನೆಯಲ್ಲಿದೆ. 2030 ರ ವೇಳೆಗೆ ನೈಸರ್ಗಿಕ ಅನಿಲದ ಪಾಲನ್ನು ಈಗಿನ ಸುಮಾರು 6 ಪ್ರತಿಶತದಿಂದ 15 ಪ್ರತಿಶತಕ್ಕೆ ಹೆಚ್ಚಿಸಲು ಬಯಸಿದೆ.
ಚೀನಾಕ್ಕೆ ಹೋಲಿಸಿದರೆ ಭಾರತವು ಟ್ರಕ್ ಗಳಲ್ಲಿ LNG ಇಂಧನ ಅಳವಡಿಸಿಕೊಳ್ಳಳ್ಳುವುದರಲ್ಲಿ ಹಿಂದಿದೆ. ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು LNG ಚಾಲಿತ ಟ್ರಕ್‌ಗಳ ಬಳಕೆಯು ಈಗಾಗಲೇ ಅದರ ತೈಲ ಬೇಡಿಕೆಯನ್ನು ಕಡಿತಗೊಳಿಸಿದೆ.
ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಬಳಕೆದಾರನಾದ ಭಾರತದಲ್ಲಿ ಇಂಧನವಾಗಿ ಡೀಸೆಲ್ ಬಳಕೆಯು ಹೆಚ್ಚಿದೆ. ಟ್ರಕ್‌ಗಳನ್ನು LNG ಇಂಧನ ಬಳಸುವಂತೆ ಮಾಡುವುದರಿಂದ ಭಾರತದ ಡೀಸೆಲ್ ಬಳಕೆಯನ್ನು ಕಡಿಮೆಯಾಗಲಿದೆ.
ಭಾರತದಲ್ಲಿನ ಕೆಲವು ಕಾರುಗಳು ಮತ್ತು ಬಸ್ಸುಗಳು ಈಗಾಗಲೇ CNG ಅನಿಲವನ್ನು ಬಳಸುತ್ತಿವೆ., ಉತ್ತಮ LNG ಬಳಕೆಯು ಟ್ರಕ್‌ಗಳಿಗೆ ದೀರ್ಘಾವಧಿಯಲ್ಲಿ ಉತ್ತಮ ಆಯ್ಕೆಯಾಗಿದೆ ಎಂದು ಸರ್ಕಾರ ಹೇಳುತ್ತದೆ.
ಭಾರತೀಯ ತೈಲ ಮತ್ತು ಅನಿಲ ಚಿಲ್ಲರೆ ವ್ಯಾಪಾರಿಗಳು ಆರಂಭಿಕ ಹಂತದಲ್ಲಿ 49 LNG ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಪ್ರಕಟವಾದ ಕರಡು ನೀತಿಯ ಪ್ರಕಾರ ದೇಶಾದ್ಯಂತ ಸ್ಥಿರವಾದ ಏಕರೂಪದ LNG ಬೆಲೆ ಇರುವಂತೆ ಮಾಡಲು ಸರ್ಕಾರ ಯೋಜಿಸಿದೆ. ಪ್ರಸ್ತುತ, ರಾಜ್ಯದ ತೆರಿಗೆ ವ್ಯತ್ಯಾಸಗಳಿಂದಾಗಿ, LNG ವೆಚ್ಚವು ಭಾರತದಲ್ಲಿ ಏಕರೂಪವಾಗಿಲ್ಲ.
ಎರಡರಿಂದ ಮೂರು ವರ್ಷಗಳವರೆಗೆ ಸುಮಾರು 50,000 ಟ್ರಕ್‌ಗಳ ಅಗತ್ಯಗಳನ್ನು ಪೂರೈಸಲು ಸ್ಥಳೀಯವಾಗಿ ದಿನಕ್ಕೆ 0.5 ಮಿಲಿಯನ್ ಕ್ಯೂಬಿಕ್ ಮೀಟರ್ ಅನಿಲದ ಅಗತ್ಯವಿದೆ ಎಂದು ಕರಡು ಹೇಳಿದೆ.
ಭಾರತದ ಸಾರಿಗೆ ವಲಯದಲ್ಲಿ ಹೆವಿ ಡ್ಯೂಟಿ ವಾಹನಗಳಿಂದಾಗಿ ಹೆಚ್ಚಿನ ಶಕ್ತಿ-ಸಂಬಂಧಿತ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಾರಣವಾಗಿವೆ.
ಮಾರ್ಚ್ 31, 2020ಕ್ಕೆ ಅನ್ವಯವಾಗುವಂತೆ ದೇಶದಲ್ಲಿ 58 ಲಕ್ಷ ಟ್ರಕ್‌ಗಳು ಮತ್ತು ಲಾರಿಗಳು, 16 ಲಕ್ಷ ಮಲ್ಟಿ ಆಕ್ಸಲ್ ಆರ್ಟಿಕ್ಯುಲೇಟೆಡ್ ವಾಹನಗಳು ದೇಶದಲ್ಲಿ ನೋಂದಾವಣೆಯಾಗಿದೆ ಎಂದು ಕರಡು ಹೇಳಿದೆ.