2025ರಿಂದ ದೇಶದಾದ್ಯಂತ ಜನಗಣತಿ ಆರಂಭ?
ಹೊಸದಿಲ್ಲಿ: ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ನಂತರ 2025ರಲ್ಲಿ ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು ಸರ್ಕಾರ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ INDIA TODAY ವರದಿ ಮಾಡಿದೆ.
ಜನಗಣತಿ ಪ್ರಕ್ರಿಯೆಯು 2025ರಲ್ಲಿ ಪ್ರಾರಂಭವಾಗುತ್ತದೆ ಮತ್ತು 2026ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಸ್ಥಾನಗಳ ಮರುವಿಂಗಡನೆ ಪ್ರಾರಂಭವಾಗಲಿದ್ದು, ಈ ಪ್ರಕ್ರಿಯೆ 2028ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜಾತಿ ಗಣತಿ ಕುರಿತು ಹಲವು ವಿರೋಧ ಪಕ್ಷಗಳ ಬೇಡಿಕೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ವಿವರಗಳನ್ನು ಈವರೆಗೆ ಬಹಿರಂಗಪಡಿಸಿಲ್ಲ. ಜನಗಣತಿಯು ಸಾಮಾನ್ಯ ಮತ್ತು ಎಸ್ಸಿ-ಎಸ್ಟಿ ಜನಸಂಖ್ಯೆಗಳ ಕುರಿತ ಸಮೀಕ್ಷೆ ಮತ್ತು ಈ ವರ್ಗಗಳಲ್ಲಿನ ಉಪ-ಪಂಗಡಗಳ ಜನಸಂಖ್ಯೆ ಕುರಿತು ಕೂಡ ಸಮೀಕ್ಷೆಗಳನ್ನು ನಡೆಸಲಿದೆ ಎನ್ನಲಾಗಿದೆ.
ಜನಗಣತಿಗೆ ಸಂಬಂಧಿಸಿದ ವರದಿಗಳ ನಂತರ, ಜಾತಿಗಣತಿ ಕುರಿತು ಚರ್ಚೆ ಪುನರಾರಂಭವಾಗಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್, ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದು ಒಬಿಸಿ ಸಮುದಾಯಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸಲು ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಲಾಗುತ್ತದೆ. 2021ಕ್ಕೆ ಜನಗಣತಿ ನಡೆಸಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ಜನಗಣತಿ ಮುಂದೂಡಲಾಗಿದೆ.