ಹರ್ಯಾಣ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಸಾಧ್ಯತೆ ಕಡಿಮೆ : ಜೈರಾಮ್ ರಮೇಶ್

Update: 2024-07-04 15:29 GMT

ಜೈರಾಮ್ ರಮೇಶ್ | PC : PTI 


ಹೊಸದಿಲ್ಲಿ: ದಿಲ್ಲಿ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಸಾಧ್ಯತೆ ಕ್ಷೀಣವಾಗಿದ್ದರೂ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜೈರಾಮ್ ರಮೇಶ್, ವಿಧಾನಸಭಾ ಚುನಾವಣೆಗಳಿಗೆ ಇಂಡಿಯಾ ಮೈತ್ರಿಕೂಟವು ಒಂದೇ ಸೂತ್ರವನ್ನು ಅನುಸರಿಸುವುದಿಲ್ಲ. ಕಾಂಗ್ರೆಸ್ ನಾಯಕರು ಹಾಗೂ ಇತರ ಮೈತ್ರಿಕೂಟದ ಪಾಲುದಾರರು ಅಂತಹ ಒಪ್ಪಂದಕ್ಕೆ ಬಂದ ಕಡೆ ಮಾತ್ರ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಗ್ಗಟ್ಟಾಗಿ ಸ್ಪರ್ಧಿಸಲಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಗ್ಗಟ್ಟಾಗಿ ಸ್ಪರ್ಧಿಸಲಿವೆಯೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೈರಾಮ್ ರಮೇಶ್, ಅಂತಹ ಮೈತ್ರಿ ಜಾರ್ಖಂಡ್‌ ಹಾಗೂ ಮಹಾರಾಷ್ಟ್ರದಲ್ಲಿ ಏರ್ಪಡಲಿದೆ ಎಂದು ಹೇಳಿದ್ದಾರೆ.

"ಪಂಜಾಬ್‌ನಲ್ಲಿ ಇಂಡಿಯಾ ಮೈತ್ರಿಕೂಟ ಇರುವುದಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರ್ಯಾಣದಲ್ಲಿ ನಾವು ಆಪ್ ಪಕ್ಷಕ್ಕೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆವು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಆ ಮೈತ್ರಿ ಇರಲಿದೆ ಎಂದು ನನಗನಿಸುತ್ತಿಲ್ಲ. ದಿಲ್ಲಿಯ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಇರುವುದಿಲ್ಲ ಎಂದು ಸ್ವತಃ ಆಪ್ ಪಕ್ಷವೇ ಹೇಳಿದೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಒಗ್ಗಟ್ಟಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು, ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News