ಚಂದ್ರಯಾನ-3: ಚಂದ್ರನ ದೂರ ಪ್ರದೇಶದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಇಸ್ರೋ
ಬೆಂಗಳೂರು: ಇಸ್ರೋದ ಚಂದ್ರಯಾನ-3 ಆ.23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸನ್ನದ್ಧವಾಗಿದೆ. ಈ ಮಹತ್ವದ ಸಾಧನೆಗೆ ಕ್ಷಣಗಣನೆಯ ನಡುವೆಯೇ ಇಸ್ರೋ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಸೋಮವಾರ ಬಿಡುಗಡೆಗೊಳಿಸಿದೆ. ಲ್ಯಾಂಡರ್ ಹಝಾರ್ಡ್ ಡಿಟೆಕ್ಷನ್ ಆ್ಯಂಡ್ ಅವಾಯ್ಡನ್ಸ್ ಕ್ಯಾಮೆರಾ (ಎಲ್ಎಚ್ಡಿಎಸಿ) ಈ ಚಿತ್ರಗಳನ್ನು ಸೆರೆಹಿಡಿದಿದೆ.
ಲ್ಯಾಂಡರ್ ಇಳಿಯಲು ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸುರಕ್ಷಿತ ಪ್ರದೇಶವನ್ನು ಪತ್ತೆ ಹಚ್ಚಲು ನೆರವಾಗುವ ಈ ಕ್ಯಾಮೆರಾವನ್ನು ಇಸ್ರೋದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿರುವ ಅಹ್ಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎಸ್ಎಸಿ) ಅಭಿವೃದ್ಧಿಗೊಳಿಸಿದೆ.
ಇಸ್ರೋದ ಪ್ರಕಾರ ಚಂದ್ರಯಾನ-3ರ ಅಭಿಯಾನದ ಗುರಿಗಳನ್ನು ಸಾಧಿಸಲು ಎಲ್ಎಚ್ಡಿಎಸಿಯಂತಹ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಲ್ಯಾಂಡರ್ನಲ್ಲಿ ಅಳವಡಿಸಲಾಗಿದೆ.
ಜು.14ರಂದು ಉಡಾವಣೆಗೊಂಡ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಇಳಿಯುವಿಕೆ ಮತ್ತು ಪರ್ಯಟನ ಸಾಮರ್ಥ್ಯವನ್ನು ಸಾಬೀತುಗೊಳಿಸಲು ಚಂದ್ರಯಾನ-2ರ ಅನುಸರಣಾ ಅಭಿಯಾನವಾಗಿದೆ.
ರೋವರ್ ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಆ.23ರಂದು ಸಂಜೆ 6:04ರ ಸುಮಾರಿಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಇಸ್ರೋ ರವಿವಾರ ತಿಳಿಸಿತ್ತು.