ಚಂದ್ರಯಾನ 3: ಲ್ಯಾಂಡರ್,ರೋವರ್ ಜೊತೆ ಸಂಪರ್ಕ ಸಾಧಿಸುವ ಇಸ್ರೋ ಪ್ರಯತ್ನ ವಿಫಲ
ಬೆಂಗಳೂರು: ಚಂದ್ರಯಾನ 3ರ ಲ್ಯಾಂಡರ್ನೌಕೆ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಮಾಡಲಾಗಿದ್ದು, ಆದರೆ ಅವುಗಳಿಂದ ಇನ್ನೂ ಯಾವುದೇ ಸಂಕೇತ (ಸಿಗ್ನಲ್)ಗಳು ಬಂದಿಲ್ಲವೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶುಕ್ರವಾರ ತಿಳಿಸಿದೆ.
ವಿಕ್ರಮ್ ಹಾಗೂ ಪ್ರಜ್ಞಾನ್ ನೌಕೆಗಳನ್ನು ಪುನರುಜೀವನಗೊಳಿಸುವ ಯೋಜನೆಯನ್ನು ಕಾರಣಾಂತರಗಳಿಂದ ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಅದು ಹೇಳಿದೆ.
ಈ ಬಗ್ಗೆ ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ಸ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ ಅವರು ಹೇಳಿಕೆ ನೀಡಿ, ಈ ಮೊದಲು ನಾವು ಪ್ರಜ್ಞಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನೌಕೆಯನ್ನು ಸೆಪ್ಟಂಬರ್ 22ರಂದು ಮರುಕ್ರಿಯಾಶೀಲಗೊಳಿಸಲು ಯೋಜಿಸಿದ್ದೆವು.ಆದರೆ ಕೆಲವು ಕಾರಣಗಳಿಂದ ಅದನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ’’ ಎಂದವರು ಹೇಳಿದ್ದಾರೆ.
ಚಂದ್ರನ ಮೇಲ್ಮೈನಲ್ಲಿ ಹಗಲು ಇರುವವರೆಗೆ (ಭೂಮಿಯ 14 ದಿನಗಳು) ಯಶಸ್ವಿಯಾಗಿ ಪ್ರಯೋಗಗಳನ್ನು ನಡೆಸಿದ ವಿಕ್ರಮ್ ರೋವರ್ ಹಾಗೂ ಲ್ಯಾಂಡರ್ ನೌಕೆಗಳನ್ನು, ಕತ್ತಲಿನ ಅವಧಿಯಲ್ಲಿ (ಭೂಮಿಯ 14 ದಿನಗಳು) ಕ್ರಮವಾಗಿ ಸೆಪ್ಟಂಬರ್ 2 ಹಾಗೂ 4ರಂದು ಸ್ಲೀಪ್ ಮೋಡ್(ತಟಸ್ಥಗತಿ) ನಲ್ಲಿರಿಸಲಾಗಿತ್ತು.
ಈ ಉಪಕರಣಗಳನ್ನು ಸ್ಲೀಪ್ಮೋಡ್ನಲ್ಲಿ ಇರಿಸುವ ಮೊದಲು ಅವುಗಳಲ್ಲಿರುವ ಸೌರಫಲಕಗಳು ಹಾಗೂ ಬ್ಯಾಟರಿಗಳನ್ನು ಸೂರ್ಯನ ಬೆಳಕಿನಿಂದ ರೀಚಾರ್ಜ್ ಮಾಡಲಾಗಿತ್ತು.
ಒಂದು ವೇಳೆ ಲ್ಯಾಂಡರ್ ಹಾಗೂ ರೋವರ್ಗಳನ್ನು ಸಕ್ರಿಯಗೊಳಿಸುವ ಕಾರ್ಯ ಯಶಸ್ವಿಯಾದಲ್ಲಿ, ಚಂದ್ರಯಾನ 3 ಯೋಜನೆಯ ಕಾಲಾವಧಿ ವಿಸ್ತರಣೆಯಾಗಲಿದ್ದು, ಚಂದ್ರನ ಮೇಲ್ಮೈಯಲ್ಲಿ ಇನ್ನಷ್ಟು ಅಧ್ಯಯನ ನಡೆಸಲು ಅದಕ್ಕೆ ಸಾಧ್ಯವಾಗಲಿದೆ.