ʼಅಸಮರ್ಪಕ ಸೇವೆʼ: ಶೋರೂಮ್ ಮುಂದೆಯೇ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹಚ್ಚಿದ ಮಾಲಕ

Update: 2024-11-29 11:53 GMT

ಚೆನ್ನೈ: ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯೊಂದರ ಅಸಮರ್ಪಕ ಸೇವೆಯಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗೆ ಕಂಪನಿಯ ಶೋರೂಮ್ ಮುಂದೆಯೇ ಬೆಂಕಿ ಹಚ್ಚಿರುವ ಘಟನೆ ಬುಧವಾರ ಚೆನ್ನೈನ ಅಂಬತ್ತೂರ್ ನಲ್ಲಿ ನಡೆದಿದೆ.

ತಿರುಮುಲ್ಲೈವಯಲ್ ನಿವಾಸಿಯಾದ ಪಾರ್ಥಸಾರಥಿ ಎಂಬವರು ರೂ. 1.80 ಲಕ್ಷ ಪಾವತಿಸಿ, ಏಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು. ಆದರೆ, ಸ್ಕೂಟರ್ ಅನ್ನು ಖರೀದಿಸಿದಾಗಿನಿಂದ ಅದು ಪದೇ ಪದೇ ತಾಂತ್ರಿಕ ತೊಂದರೆಗೊಳಗಾಗುತ್ತಿರುವುರಿಂದ, ನಾನು ಹಲವು ಸರ್ವಿಸ್‌ ಸೆಂಟರ್‌ ಗೆ ಭೇಟಿ ನೀಡುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪುನರಾವರ್ತಿತ ಪ್ರಯತ್ನಗಳನ್ನು ಮಾಡಿದರೂ, ಸ್ಕೂಟರ್ ನ ತಾಂತ್ರಿಕ ಸಮಸ್ಯೆ ಬಗೆಹರಿಯಲೇ ಇಲ್ಲ ಎಂದೂ ಅವರು ದೂರಿದ್ದಾರೆ.

ಹೀಗಾಗಿ, ಶೋರೂಮ್ ಸಿಬ್ಬಂದಿಗಳ ಸ್ಪಂದನೆಯ ಕೊರತೆಯಿಂದ ಹತಾಶರಾಗಿರುವ ಪಾರ್ಥಸಾರಥಿ, ತಮ್ಮ ಸ್ಕೂಟರ್ ಅನ್ನು ಶೋರೂಮ್ ಆವರಣಕ್ಕೆ ತಂದು, ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಇದನ್ನು ಗಮನಿಸಿದ ದಾರಿಹೋಕರು ಬೆಂಕಿಯನ್ನು ನಂದಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತಮ್ಮನ್ನು ಸಮಾಧಾನಿಸಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರ ಬಳಿ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳ ಕುರಿತು ಏರುದನಿಯಲ್ಲಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಅಲ್ಲದೆ, ಸ್ಕೂಟರ್ ಮಾಲಕ ಪಾರ್ಥಸಾರಥಿ ತಮ್ಮ ಕುಂದುಕೊರತೆಗಳನ್ನು ಪೊಲೀಸ್ ಸಿಬ್ಬಂದಿಗಳ ಬಳಿಯೂ ಹಂಚಿಕೊಳ್ಳುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ.

ಈ ಘಟನೆಯಿಂದ ಶೋರೂಮ್ ಎದುರು ತೀವ್ರ ಸಂಚಾರ ದಟ್ಟಣೆಯುಂಟಾಯಿತು. ಹೀಗಾಗಿ, ಶೋರೂಮ್ ಮುಂದೆ ನೆರೆದಿದ್ದ ಜನರನ್ನು ಚದುರಿಸುವುದು ಪೊಲೀಸರಿಗೆ ಅನಿವಾರ್ಯವಾಯಿತು.

ಘಟನೆ ನಡೆಯುತ್ತಿದ್ದಂತೆಯೆ ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ, ಪಾರ್ಥಸಾರಥಿ ಮಾತ್ರ ಸಮಸ್ಯೆಯನ್ನು ಏರು ದನಿಯಲ್ಲಿ ಪ್ರಶ್ನಿಸುವುದನ್ನು ಮುಂದುವರಿಸಿಯೇ ಇದ್ದರು. ನನ್ನ ಸಮಸ್ಯೆಗಳನ್ನು ಕಂಪೆನಿ ನಿರ್ಲಕ್ಷಿಸಿದ್ದರಿಂದ ನಾನು ಇಂತಹ ಕ್ರಮಕ್ಕೆ ಮುಂದಾಗಬೇಕಾಯಿತು ಎಂದೂ ಅವರು ಪೊಲೀಸರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶೋರೂಮ್ ಸಿಬ್ಬಂದಿಗಳು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಪಾರ್ಥಸಾರಥಿಗೆ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News