ಭಿಕ್ಷಾಟನೆ ಮಾಡುತ್ತಿರುವವರ ಕುರಿತು ಮಾಹಿತಿ ನೀಡುವವರಿಗೆ 1,000 ರೂ. ಬಹುಮಾನ ಘೋಷಿಸಿದ ಇಂದೋರ್ ಜಿಲ್ಲಾಡಳಿತ!
ಇಂದೋರ್: ಭಿಕ್ಷಾಟನೆ ನಿಷೇಧ ಕಾಯ್ದೆ ದೇಶಾದ್ಯಂತ ಜಾರಿಯಲ್ಲಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನವಾಗದೆ ಇರುವುದರಿಂದ ಈಗಲೂ ಭಾರತದಲ್ಲಿ ಭಿಕ್ಷಾಟನೆ ಪಿಡುಗಿನ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ. ಭಿಕ್ಷುಕರ ಕಲ್ಯಾಣಕ್ಕೆಂದು ಇರುವ ಭಿಕ್ಷುಕರ ಕಲ್ಯಾಣ ನಿಧಿ ಸಮರ್ಪಕವಾಗಿ ಬಳಕೆಯಾಗದಿರುವುದು ಇದಕ್ಕೆ ಪ್ರಮುಖ ಕಾರಣ. ಆದರೆ, ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಇಂದೋರ್ ಜಿಲ್ಲಾಡಳಿತ, ತಮ್ಮ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವವರ ಕುರಿತು ಮಾಹಿತಿ ನೀಡುವವರಿಗೆ 1,000 ರೂ. ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ ಜಿಲ್ಲಾಡಳಿತವು ಭಿಕ್ಷಾಟನೆಯನ್ನು ನಿಷೇಧಿಸಿದ್ದು, ಭಿಕ್ಷುಕರಿಗೆ ಭಿಕ್ಷೆ ನೀಡುವುದು ಹಾಗೂ ಭಿಕ್ಷುಕರಿಗಾಗಿ ಸಾಮಗ್ರಿಗಳನ್ನು ಖರೀದಿಸುವುದನ್ನೂ ನಿಷೇಧಿಸಿದೆ.
ಅಧಿಕಾರಿಗಳ ಪ್ರಕಾರ, ಜಿಲ್ಲಾಡಳಿತವು ಜನವರಿ 2ರಂದು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ಭಿಕ್ಷಾಟನೆ ಕುರಿತು ಮಾಹಿತಿ ನೀಡುವವರಿಗೆ 1,000 ರೂ. ಬಹುಮಾನ ಪ್ರಕಟಿಸಿದೆ ಎಂದು ತಿಳಿಸಿದ್ದಾರೆ. ಭಿಕ್ಷುಕರ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಸಂಖ್ಯೆಯನ್ನೂ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಆಶಿಶ್ ಚೋಪ್ರಾ, ಕಳೆದ ನಾಲ್ಕು ದಿನಗಳಿಂದ ನಾವು ಒದಗಿಸಿರುವ ಮೊಬೈಲ್ ಸಂಖ್ಯೆಗೆ ಸುಮಾರು 200 ಮಂದಿ ಕರೆ ಮಾಡಿದ್ದು, ತನಿಖೆಯ ನಂತರ ಈ ಪೈಕಿ 12 ಮಂದಿ ನೀಡಿರುವ ಮಾಹಿತಿ ಸಮರ್ಪಕವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
“ಈ 12 ಮಂದಿಯ ಪೈಕಿ 6 ಮಂದಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1,000 ರೂ. ಬಹುಮಾನ ಸ್ವೀಕರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಭಿಕ್ಷಾಟನೆಯ ವಿರುದ್ಧ ಜಿಲ್ಲಾಡಳಿತ ಹೊರಡಿಸಿರುವ ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ. ಈ ಆರೋಪದಡಿ ಒಂದು ವರ್ಷ ಸೆರೆವಾಸ ಅಥವಾ 5,000 ರೂ.ವರೆಗಿನ ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ನಗರದಲ್ಲಿ ಭಿಕ್ಷಾಟನೆಯಲ್ಲಿ ಭಾಗಿಯಾಗಿದ್ದ ಸುಮಾರು 400 ಮಂದಿಯನ್ನು ಪುನರ್ವಸತಿ ಶಿಬಿರಕ್ಕೆ ಕಳಿಸಲಾಗಿದ್ದು, 64 ಮಕ್ಕಳನ್ನು ಮಕ್ಕಳ ಆರೈಕೆ ಸಂಸ್ಥೆಗೆ ರವಾನಿಸಲಾಗಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶದ 10 ನಗರಗಳನ್ನು ಭಿಕ್ಷಾಟನೆ ಮುಕ್ತಗೊಳಿಸುವ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಪೈಕಿ ಇಂದೋರ್ ನಗರ ಕೂಡಾ ಸೇರಿದೆ.