ಕಾಶ್ಮೀರ: ಮನೆಗೆ ನುಗ್ಗಿ ಸಾಮಾಜಿಕ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ (PTI)
ಶ್ರೀನಗರ: ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕಾರಣವಾದ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿರುವ ಬೆನ್ನಿಗೇ, 45 ವರ್ಷದ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಶಂಕಿತ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶನಿವಾರ ಜಮ್ಮು ಮತ್ತು ಕಾಶ್ಮೀಚರದ ಕುಪ್ವಾರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗುಲಾಂ ರಸೂಲ್ ಮಾಗ್ರೆ ಎಂದು ಗುರುತಿಸಲಾಗಿದ್ದು, ಕುಪ್ವಾರ ಪಟ್ಟಣದ ಕಾಂಡಿ ಖಾಸ್ ಪ್ರದೇಶದಲ್ಲಿರುವ ಅವರ ನಿವಾಸದೊಳಕ್ಕೆ ನುಗ್ಗಿ, ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಹತ್ಯೆಯ ಹಿಂದಿನ ಉದ್ದೇಶವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀಬರದ ಕಣಿವೆ ಪ್ರದೇಶವಾದ ಪಹಲ್ಗಾಮ್ ಬಳಿಯ ಬೈಸರಣ್ ಹುಲ್ಲುಗಾವಲು ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು, 26 ಮಂದಿಯನ್ನು ಹತ್ಯೆಗೈದು, ಹಲವರನ್ನು ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಮೃತಪಟ್ಟವರಲ್ಲಿ ಬಹುತೇಕರು ಪ್ರವಾಸಿಗರೇ ಆಗಿದ್ದರು.