ಮಹಾರಾಷ್ಟ್ರ | ಸಹಪಾಠಿಯ ಅತ್ಯಾಚಾರ, ಹತ್ಯೆಗೆ 100 ರೂ. ಸುಪಾರಿ ನೀಡಿದ 7 ತರಗತಿ ಬಾಲಕ!

Update: 2025-01-30 20:27 IST
CRIME

ಸಾಂದರ್ಭಿಕ ಚಿತ್ರ 

  • whatsapp icon

ಪುಣೆ: ಪುಣೆಯ ಹೊರವಲಯದ ದೌಂಡ್ ನಲ್ಲಿರುವ ಪ್ರತಿಷ್ಠಿತ ಇಂಗ್ಲೀಷ್ ಮಾಧ್ಯಮದ 7ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯ ಅತ್ಯಾಚಾರ ಮಾಡಿ ಹತ್ಯೆ ನಡೆಸಲು ತನ್ನದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ 100 ರೂ. ಸುಪಾರಿ ನೀಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಸುಪಾರಿ ಪಡೆದ ವಿದ್ಯಾರ್ಥಿಯು ಸುಪಾರಿ ಮೊತ್ತವನ್ನು ಸ್ವೀಕರಿಸಿದರೂ, ಶಾಲೆಯ ಆಡಳಿತ ಮಂಡಳಿ ಬಳಿಗೆ ತೆರಳಿ, ಯೋಜನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ತಮ್ಮ ಪುತ್ರಿಯ ಅತ್ಯಾಚಾರ, ಹತ್ಯೆಗೆ ಸುಪಾರಿ ನೀಡಿದ್ದ 7ನೇ ತರಗತಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳದ ಶಾಲೆಯ ವಿರುದ್ಧ ವಿದ್ಯಾರ್ಥಿನಿಯ ತಂದೆಯು ನೀಡಿದ್ದ ದೂರನ್ನು ಆಧರಿಸಿ, ದೌಂಡ್ ಠಾಣೆಯ ಪೊಲೀಸರು ರವಿವಾರ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಬಾಲಕನು ತನ್ನ ರಿಪೋರ್ಟ್ ಕಾರ್ಡ್ ನಲ್ಲಿ ತನ್ನ ಪೋಷಕರ ಸಹಿಯನ್ನು ನಕಲು ಮಾಡಿದ್ದಾನೆ ಎಂದು ಆತನ ಸಹಪಾಠಿಯು ತರಗತಿಯ ಶಿಕ್ಷಕರಿಗೆ ದೂರು ನೀಡಿದ್ದರಿಂದ ಆತ ತನ್ನ ಸಹಪಾಠಿ ಬಾಲಕಿಯ ಬಗ್ಗೆ ಅಸಮಾಧಾನಗೊಂಡಿದ್ದ ಎಂದು ಹೇಳಲಾಗಿದೆ. ಆಕೆಗೆ ಪಾಠ ಕಲಿಸಲು ಆಕೆಯ ಅತ್ಯಾಚಾರ ಹಾಗೂ ಹತ್ಯೆ ನಡೆಸುವಂತೆ ತನಗಿಂತ ಹಿರಿಯ ವಿದ್ಯಾರ್ಥಿಗೆ ಆತ 100 ರೂ. ನೀಡಿದ್ದ ಎನ್ನಲಾಗಿದೆ.

ಈ ವಿಷಯವು ಸಾರ್ವಜನಿಕಗೊಂಡರೂ ಶಾಲೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಹಲವು ದೂರುಗಳನ್ನು ನಿರ್ಲಕ್ಷಿಸಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಬಾಲಕನನ್ನು ಕೇವಲ ಗದರಿಸಿ ಕಳಿಸಲಾಗಿದೆ ಎಂದು ಅವರು ದೂರಿದ್ದಾರೆ. ನವೆಂಬರ್ 23ರಂದು ಅವರು ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದರೂ, ಅವರ ನಿರಂತರ ಒತ್ತಡದಿಂದಾಗಿ ಈ ರವಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರವಿವಾರ ಶಾಲೆಯ ಮುಖ್ಯೋರಪಾಧ್ಯಾಯರು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5) ಅಡಿ ಪ್ರಕರಣ ದಾಖಲಾಗಿದೆ. ಮಂಗಳವಾರ ಆ ಮೂವರನ್ನೂ ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News