ತೆರಿಗೆ ಸಂಕಷ್ಟದಲ್ಲಿ ತೊಳಲಾಡುತ್ತಿರುವ ಸ್ವಚ್ಛ ಗಂಗಾ ಅಭಿಯಾನ: ವರದಿ

Photo Credit | indianexpress
ಹೊಸದಿಲ್ಲಿ: ರಾಷ್ಟ್ರೀಯ ಸ್ವಚ್ಛ ಗಂಗಾ ಅಭಿಯಾನ(ಎನ್‌ಎಮ್‌ಸಿಜಿ)ಯ ತೆರಿಗೆ ಸಂಕಷ್ಟಗಳಿಗೆ ಅಂತ್ಯವೇ ಇಲ್ಲದಂತಾಗಿದೆ. 243.74 ಕೋಟಿ ರೂ.ಗಳ ತೆರಿಗೆ ಪಾವತಿಸುವಂತೆ ನೋಟಿಸ್‌ಗಳನ್ನು ಪಡೆದಿರುವ ಅದು ಆದಾಯ ತೆರಿಗೆ (ಐಟಿ) ಇಲಾಖೆಯ ಮೌಲ್ಯಮಾಪನ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು indianexpress.com ವರದಿ ಮಾಡಿದೆ.
ಎನ್‌ಎಮ್‌ಜಿಸಿಯ ಪ್ರಕಾರ ‘ಮುಖರಹಿತ ಮೌಲ್ಯಮಾಪನ ಪ್ರಕ್ರಿಯೆ’ ವಿಷಯಗಳನ್ನು ಹೆಚ್ಚು ಕಷ್ಟಕರವಾಗಿಸಿದೆ. ತನ್ನ ರಿಟರ್ನ್‌ಗಳನ್ನು ಪರಿಷ್ಕರಿಸಲು ಅವಕಾಶ ನೀಡುವಂತೆ ಅದು ಈಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯನ್ನು ಕೋರಿಕೊಂಡಿದೆ.
ಆಗಸ್ಟ್ 12, 2011ರಂದು ಸೊಸೈಟಿಗಳ ನೊಂದಣಿ ಕಾಯ್ದೆಯಡಿ ಸೊಸೈಟಿಯಾಗಿ ನೋಂದಾಯಿಸಲ್ಪಟ್ಟಿದ್ದ ಎನ್‌ಎಮ್‌ಸಿಜಿಯನ್ನು ನಂತರ ಅಕ್ಟೋಬರ್ 7, 2016ರಂದು ಪರಿಸರ (ರಕ್ಷಣೆ) ಕಾಯ್ದೆ,1986ರಡಿ ‘ಪ್ರಾಧಿಕಾರ’ವನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈ ಪರಿವರ್ತನೆಯ ಹೊರತಾಗಿಯೂ ಅದರ ಪಾನ್(ಶಾಶ್ವತ ಖಾತೆ ಸಂಖ್ಯೆ) ‘ವ್ಯಕ್ತಿಗಳ ಸಂಘ(ಎಒಪಿ)’ ವರ್ಗದಲ್ಲಿಯೇ ಉಳಿದುಕೊಂಡಿದೆ. ಇದರಿಂದಾಗಿ ಐಟಿ ಇಲಾಖೆಯ ಸಾಫ್ಟ್‌ವೇರ್ ಅದನ್ನು ಹೆಚ್ಚಿನ ಆದಾಯದ ಸಂಸ್ಥೆ ಎಂದು ಗುರುತಿಸಿದೆ,ಪರಿಣಾಮವಾಗಿ ಅದಕ್ಕೆ ಪದೇ ಪದೇ ತೆರಿಗೆ ನೋಟಿಸ್‌ಗಳು ಬರುತ್ತಿವೆ.
ಎನ್ ಎಮ್‌ಸಿಜಿಯ ಆಡಿಟ್ ಪುನರ್‌ಪರಿಶೀಲನೆ ಸಮಿತಿ(ಎಆರ್‌ಸಿ)ಮತ್ತು ಬಜೆಟ್ ಪುನರ್‌ಪರಿಶೀಲನೆ ಸಮಿತಿ(ಬಿಆರ್‌ಸಿ)ಯ ಜಂಟಿ ಸಭೆಗಳಲ್ಲಿ ಈ ವಿಷಯವನ್ನು ಎತ್ತಲಾಗಿತ್ತು. ಫೆ.7ರಂದು ನಡೆದ ಇತ್ತೀಚಿನ ಸಭೆಯಲ್ಲಿ ಎನ್‌ಎಮ್‌ಸಿಜಿ ಅಧಿಕಾರಿಗಳು ತೆರಿಗೆ ಕಳವಳಗಳನ್ನು ಎತ್ತಿ ತೋರಿಸಿದ್ದಾರೆ.
ಎನ್‌ಎಮ್‌ಸಿಜಿಯ ಪಾನ್ ಕಾರ್ಡ್ ಎಒಪಿ ವರ್ಗದಲ್ಲಿರುವುದರಿಂದ ಅದು ಪ್ರತಿವರ್ಷ ಐಟಿ ಇಲಾಖೆಯಿಂದ ಹಲವಾರು ನೋಟಿಸ್‌ಗಳನ್ನು ಪಡೆಯುತ್ತಿದೆ. 2023-24 ಮತ್ತು 2024-25ನೇ ಸಾಲಿನ ನೋಟಿಸ್‌ಗಳನ್ನು ಇತ್ಯರ್ಥಗೊಳಿಸಲಾಗಿದ್ದರೂ,2022-23ನೇ ಸಾಲಿನ,ಒಟ್ಟು 243.74 ಕೋಟಿ ರೂ.ತೆರಿಗೆ ಬೇಡಿಕೆಯ ಎರಡು ನೋಟಿಸ್‌ಗಳು ಬಾಕಿಯುಳಿದಿವೆ. ಐಟಿ ಇಲಾಖೆಯ ಆದೇಶಗಳನ್ನು ಎನ್‌ಎಂಸಿಜಿ ಪ್ರಶ್ನಿಸಿದ್ದು,ಮೌಲ್ಯಮಾಪನ ಆದೇಶದ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಮಾ.11ರಂದು ವಿತರಿಸಲಾದ ಸಭೆಯ ನಡಾವಳಿಗಳಲ್ಲಿ ಹೇಳಲಾಗಿದೆ.