ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಣ್ಣ ʼಕೇಸರಿʼಗೆ ಬದಲಾವಣೆ
ಚೆನ್ನೈ: ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಿಳಿ ಹಾಗೂ ನೀಲಿ ಬಣ್ಣದ ಬದಲು ಕೇಸರಿ ಬಣ್ಣದಲ್ಲಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ನ ಬಣ್ಣ ತ್ರಿವರ್ಣ ಧ್ವಜದಿಂದ ಪ್ರೇರಣೆ ಪಡೆದಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ವಂದೇ ಭಾರತ್ ನ ಒಟ್ಟು 25 ರೈಲುಗಳು ನಿಯೋಜಿತ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಎರಡು ರೈಲುಗಳನ್ನು ಕಾಯ್ದಿರಿಸಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಯೋಗಿಕವಾಗಿ ಬಣ್ಣ ಬದಲಾಯಿಸಿದ 28ನೇ ರೈಲನ್ನು ವಂದೇ ಭಾರತ್ ರೈಲುಗಳನ್ನು ನಿರ್ಮಿಸುವ ಚೆನ್ನೈಯ ಇಂಟಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನೂತನ ರೈಲುಗಳಲ್ಲಿ 25 ಹೊಸ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಐಸಿಎಫ್ಗೆ ಶನಿವಾರ ಭೇಟಿ ನೀಡಿದ ವೈಷ್ಣವ್ ಅವರು ತಿಳಿಸಿದ್ದಾರೆ.
‘‘ವಂದೇ ಭಾರತ್ ಎಕ್ಸ್ಪ್ರೆಸ್ ಕಾರ್ಯಾಚರಣೆ ಸಂದರ್ಭ ಎಸಿ, ಶೌಚಾಲಯ ಮೊದಲಾದುವುಗಳಿಗೆ ಸಂಬಂಧಿಸಿ ಕ್ಷೇತ್ರ ಘಟಕದಿಂದ ಪಡೆದ ಮಾಹಿತಿಯನ್ನು ಆಧರಿಸಿ ವಿನ್ಯಾಸದಲ್ಲಿ ಸುಧಾರಣೆ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.