ಮಹಾರಾಷ್ಟ್ರ ಚುನಾವಣೆಯಲ್ಲಿ ಹೀನಾಯ ಸೋಲು: ಪಕ್ಷದ ಮಾನ್ಯತೆ, ಚಿಹ್ನೆ ಕಳೆದುಕೊಳ್ಳುವ ಭೀತಿಯಲ್ಲಿ ರಾಜ್ ಠಾಕ್ರೆ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲದ ರಾಜ್ ಠಾಕ್ರೆ ನೇತೃತ್ವದ ನವನಿರ್ಮಾಣ ಸೇನೆ (ಎಂಎನ್ಎಸ್) ರಾಜಕೀಯ ಪಕ್ಷದ ಮಾನ್ಯತೆ ಮತ್ತು ಅದರ ʼರೈಲ್ವೆ ಎಂಜಿನ್ʼ ಚಿಹ್ನೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಸೇರಿದಂತೆ ನವನಿರ್ಮಾಣ ಸೇನೆಯಿಂದ ಕಣಕ್ಕಿಳಿದ 125 ಅಭ್ಯರ್ಥಿಗಳಲ್ಲಿ ಯಾರೂ ಕೂಡ ಗೆಲುವನ್ನು ಸಾಧಿಸಿಲ್ಲ.
ರಾಜಕೀಯ ಪಕ್ಷವು ತನ್ನ ಮಾನ್ಯತೆ ಮತ್ತು ಚುನಾವಣಾ ಚಿಹ್ನೆಯನ್ನು ಉಳಿಸಿಕೊಳ್ಳಲು ಭಾರತದ ಚುನಾವಣಾ ಆಯೋಗ ರೂಪಿಸಿರುವ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು. ಈ ಕುರಿತು ಮಹಾರಾಷ್ಟ್ರದ ಮಾಜಿ ಶಾಸಕಾಂಗ ಕಾರ್ಯದರ್ಶಿ ಅನಂತ್ ಕಲ್ಸೆ ಅವರು ವಿವರಿಸಿದ್ದು, ರಾಜಕೀಯ ಪಕ್ಷಗಳು ಮಾನ್ಯತೆಯನ್ನು ಉಳಿಸಿಕೊಳ್ಳಲು ಕನಿಷ್ಠ ಒಂದು ಸ್ಥಾನವನ್ನು ಗೆಲ್ಲಬೇಕು ಮತ್ತು ಒಟ್ಟು ಮತ ಹಂಚಿಕೆಯ ಶೇಕಡಾ 8ರಷ್ಟು ಗಳಿಸಬೇಕು ಅಥವಾ 6% ಮತಗಳೊಂದಿಗೆ ಎರಡು ಸ್ಥಾನಗಳನ್ನು ಗೆಲ್ಲಬೇಕು ಅಥವಾ 3% ಮತಗಳೊಂದಿಗೆ ಮೂರು ಸ್ಥಾನಗಳನ್ನು ಗೆಲ್ಲಬೇಕು. ಈ ಯಾವುದೇ ಷರತ್ತುಗಳನ್ನು ಪೂರೈಸದಿದ್ದರೆ ಅಂತಹ ಪಕ್ಷಗಳ ಮಾನ್ಯತೆಯನ್ನು ಚುನಾವಣಾ ಆಯೋಗವು ಹಿಂಪಡೆಯಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ MNS ಕೇವಲ 1.8 ಪ್ರತಿಶತ ಮತಗಳನ್ನು ಮಾತ್ರ ಪಡೆದುಕೊಂಡಿದ್ದು, ಯಾವುದೇ ಕ್ಷೇತ್ರಗಳನ್ನು ಗೆದ್ದುಕೊಂಡಿಲ್ಲ. ಇದರಿಂದ ರಾಜ್ ಠಾಕ್ರೆ ನೇತೃತ್ವದ MNS ಪಕ್ಷ ಮಾನ್ಯತೆ ಕಳೆದುಕೊಳ್ಳುವ ಅಪಾಯದಲ್ಲಿದೆ.