"ಶಶಿ ತರೂರ್ ಕಾಂಗ್ರೆಸ್ ನೊಂದಿಗಿದ್ದಾರೊ ಅಥವಾ ಬಿಜೆಪಿಯೊಂದಿಗೊ?": ಪಹಲ್ಗಾಮ್ ದಾಳಿಯ ಕುರಿತ ತರೂರ್ ಹೇಳಿಕೆಗೆ ಕಾಂಗ್ರೆಸ್ ನಾಯಕ ತರಾಟೆ

ಉದಿತ್ ರಾಜ್ , ಶಶಿ ತರೂರ್ | PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ಅವರ ರಾಜಕೀಯ ನಿಷ್ಠೆಯ ಕುರಿತು ಪ್ರಶ್ನಿಸಿದ್ದಾರೆ. ಶಶಿ ತರೂರ್ ಕಾಂಗ್ರೆಸ್ ನೊಂದಿಗಿದ್ದಾರೊ ಅಥವಾ ಬಿಜೆಪಿಯೊಂದಿಗಿದ್ದಾರೊ ಎಂದೂ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ರವಿವಾರ ಪ್ರತಿಕ್ರಿಯೆ ನೀಡಿದ್ದ ಶಶಿ ತರೂರ್, ಪಹಲ್ಗಾಮ್ ಭಯೋತ್ಪಾದಕ ದಾಳಿ ಬಹುಶಃ ಗುಪ್ತಚರ ವೈಫಲ್ಯದಿಂದ ಸಂಭವಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೆ, ಈ ದಾಳಿಯನ್ನು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಹೋಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಉದಿತ್ ರಾಜ್, “ನೀವು ಕಾಂಗ್ರೆಸ್ ಪಕ್ಷದಲ್ಲಿದ್ದೀರೊ ಅಥವಾ ಬಿಜೆಪಿಯಲ್ಲಿದ್ದೀರೊ ಎಂದು ಶಶಿ ತರೂರ್ ಅವರನ್ನು ಪ್ರಶ್ನಿಸಲು ನಾನು ಬಯಸುತ್ತೇನೆ. ಅವರೇನಾದರೂ ಬಿಜೆಪಿಯ ಸೂಪರ್ ಮ್ಯಾನ್ ಆಗಲು ಬಯಸುತ್ತಿದ್ದಾರೆಯೆ? ಸರಕಾರವು ಪಾಕ್ ಆಕ್ರಮಿತ ಕಾಶ್ಮೀರವನ್ನು ಯಾವಾಗ ಮರಳಿ ವಶಕ್ಕೆ ಪಡೆಯುತ್ತದೆ ಎಂದು ಶಶಿ ತರೂರ್ ಪ್ರಶ್ನಿಸಬೇಕಿದೆ. ಶಶಿ ತರೂರ್ ಅವರೇನಾದರೂ ಬಿಜೆಪಿಯ ವಕ್ತಾರರಾದರೆ?” ಎಂದು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಖಂಡಿತ ಅಲ್ಲಿ ಖಚಿತವಾದ ಗುಪ್ತಚರ ಮಾಹಿತಿ ಇರಲಿಲ್ಲ. ಅಲ್ಲಿ ಕೊಂಚ ಮಟ್ಟಿಗೆ ವೈಫಲ್ಯವಾಗಿದೆ. ಆದರೆ, ಎಲ್ಲರ ಪ್ರಕಾರ, ಇಡೀ ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ಸೇವೆಯನ್ನು ಹೊಂದಿರುವ ಇಸ್ರೇಲ್ ನಲ್ಲಿ ಅಕ್ಟೋಬರ್ 7, 2023ರಲ್ಲಿ ದಿಢೀರನೆ ನಡೆದ ದಾಳಿಯ ಉದಾಹರಣೆಯನ್ನು ತೆಗೆದುಕೊಳ್ಳಲಾಗಿದೆ. ಯುದ್ಧ ಕೊನೆಗೊಳ್ಳುವವರೆಗೂ ಉತ್ತರದಾಯಿತ್ವಕ್ಕೆ ಆಗ್ರಹಿಸದೆ ಕಾಯುತ್ತಿರುವ ಇಸ್ರೇಲ್ ಪ್ರಜೆಗಳಂತೆಯೆ, ನಾವೂ ಕೂಡಾ ಹಾಲಿ ಬಿಕ್ಕಟ್ಟನ್ನು ನೋಡಬೇಕಿದೆ ಹಾಗೂ ನಂತರ ಸರಕಾರದಿಂದ ಉತ್ತರದಾಯಿತ್ವವನ್ನು ಆಗ್ರಹಿಸಬೇಕಿದೆ. ಯಾವ ದೇಶವೂ ಶೇ. 100ರಷ್ಟು ಸಮರ್ಪಕ ಗುಪ್ತಚರ ವ್ಯವಸ್ಥೆಯನ್ನು ಹೊಂದಿರಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ಹಾಗೂ ಜಾಗತಿಕ ಭಯೋತ್ಪಾದನೆ ಕುರಿತ ನಿಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿ ಎಂದು ಕಾಂಗ್ರೆಸ್ ಸಂಸದರಾದ ಶಶಿ ತರೂರ್ ಅವರನ್ನು ಉದಿತ್ ರಾಜ್ ಆಗ್ರಹಿಸಿದ್ದಾರೆ. “9/11 ಭಯೋತ್ಪಾದಕ ದಾಳಿಯ ನಂತರ, ಅಮೆರಿಕದಲ್ಲಿ ಮತ್ಯಾವ ಭಯೋತ್ಪಾದಕ ಘಟನೆ ನಡೆದಿದೆ? ಬಿಜೆಪಿಯೇನಾದರೂ ಅವರನ್ನು ತನ್ನ ವಕ್ತಾರರನ್ನಾಗಿ ನೇಮಿಸಿಕೊಂಡಿದೆಯೆ ಎಂದು ನಾನವರನ್ನು ಕೇಳಲು ಬಯಸುತ್ತೇನೆ” ಎಂದೂ ಅವರು ಚಾಟಿ ಬೀಸಿದ್ದಾರೆ. ಸೂಕ್ಷ್ಮ ವಿಷಯಗಳನ್ನು ಕುರಿತ ಶಶಿ ತರೂರ್ ಅವರ ನಿಲುವುಗಳು ಕಳವಳಕಾರಿಯಾಗಿವೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ರವಿವಾರ ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಶಶಿ ತರೂರ್, ವೈಫಲ್ಯಗಳು ಸಂಭವಿಸಿದಾಗ, ಭಯೋತ್ಪಾದಕ ದಾಳಿಗಳನ್ನು ಯಶಸ್ವಿಯಾಗಿ ತಡೆ ಹಿಡಿದ ಉದಾಹರಣೆಗಳು ಪದೇ ಪದೇ ಗಮನಕ್ಕೆ ಬಾರದಂತಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.