"ಪಕ್ಷದ ಅಭಿಪ್ರಾಯವಲ್ಲ" : ಪಹಲ್ಗಾಮ್ ಭಯೋತ್ಪಾದನಾ ದಾಳಿ ಕುರಿತ ಪಕ್ಷದ ಕೆಲ ನಾಯಕರ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

Update: 2025-04-29 13:51 IST
"ಪಕ್ಷದ ಅಭಿಪ್ರಾಯವಲ್ಲ" : ಪಹಲ್ಗಾಮ್ ಭಯೋತ್ಪಾದನಾ ದಾಳಿ ಕುರಿತ ಪಕ್ಷದ ಕೆಲ ನಾಯಕರ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ಜೈರಾಮ್ ರಮೇಶ್ (Photo: PTI)

  • whatsapp icon

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಗ್ಗೆ ಪಕ್ಷದ ಕೆಲ ಹಿರಿಯ ನಾಯಕರು ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಂತರವನ್ನು ಕಾಯ್ದುಕೊಂಡಿದೆ. ಅವರ ಹೇಳಿಕೆಗಳು ʼಪಕ್ಷದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲʼ ಎಂದು ಹೇಳಿದೆ.

ʼಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪದಾಧಿಕಾರಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ನಿರ್ಣಯ ಮಾತ್ರ ಪಕ್ಷದ ನಿಲುವನ್ನು ಪ್ರತಿನಿಧಿಸುತ್ತದೆʼ ಎಂದು ಕಾಂಗ್ರೆಸ್ ಪಕ್ಷವು ಸ್ಪಷ್ಟಪಡಿಸಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಣಿಶಂಕರ್ ಅಯ್ಯರ್, ಶಶಿ ತರೂರ್, ತಾರಿಕ್ ಹಮೀದ್ ಕರ್ರಾ ಮತ್ತು ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಅವರು ಪಹಲ್ಗಾಮ್ ಭಯೋತ್ಪಾದನಾ ದಾಳಿ ಬಳಿಕ ಹೇಳಿಕೆಯನ್ನು ನೀಡಿದ್ದರು. ಅವರ ಹೇಳಿಕೆಗಳನ್ನು ಬಿಜೆಪಿ ಖಂಡಿಸಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 2025ರ ಎಪ್ರಿಲ್ 24ರಂದು ಸಭೆ ಸೇರಿತ್ತು. ಸಭೆಯಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಆ ಬಳಿಕ ಕಾಂಗ್ರೆಸ್ ಅಧ್ಯಕ್ಷರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಪಕ್ಷದ ಅಭಿಪ್ರಾಯಗಳನ್ನು ತಿಳಿಸಿದ್ದರು. ಆ ಬಳಿಕ ಕೆಲ ಕಾಂಗ್ರೆಸ್ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆದರೆ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರ ಹೇಳಿಕೆಗಳು ಪಕ್ಷದ ಅಭಿಪ್ರಾಯವನ್ನು ಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

ಪಹಲ್ಗಾಮ್‌ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News