ʼಪೊಲೀಸರಿಗೆ ಅವಮಾನ ಮಾಡಲಾಗಿದೆʼ: 'ಪುಷ್ಪ 2ʼ ಚಿತ್ರದ ವಿರುದ್ಧ ಕಾಂಗ್ರೆಸ್ ನಾಯಕನಿಂದ ಪೊಲೀಸ್ ದೂರು
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2ʼ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿನ ದೃಶ್ಯವು ಪೊಲೀಸರಿಗೆ ಅವಮಾನ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ತೀನ್ಮಾರ್ ಮಲ್ಲಣ್ಣ ಮೇಡಿಪಲ್ಲಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ದೂರಿನಲ್ಲಿ ನಟ ಅಲ್ಲು ಅರ್ಜುನ್, ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ನಿರ್ಮಾಪಕರ ಹೆಸರನ್ನು ಉಲ್ಲೇಖಿಸಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಈಜುಕೊಳದಲ್ಲಿ ಇರುವ ಸಂದರ್ಭದಲ್ಲಿ ಚಿತ್ರದ ನಾಯಕ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದು ಪೊಲೀಸರಿಗೆ ಅಗೌರವವಾಗಿದೆ ಮತ್ತು ಕಾನೂನು ಜಾರಿ ಅಧಿಕಾರಿಗಳ ಘನತೆಗೆ ಧಕ್ಕೆ ತಂದಿದೆ, ಆದ್ದರಿಂದ ಚಿತ್ರದ ನಿರ್ದೇಶಕ ಸುಕುಮಾರ್, ನಾಯಕ ನಟ ಅಲ್ಲು ಅರ್ಜುನ್ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತೀನ್ಮಾರ್ ಮಲ್ಲಣ್ಣ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಡಿಸೆಂಬರ್ 4ರಂದು 'ಪುಷ್ಪ 2ʼ ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಪುತ್ರ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಅಲ್ಲು ಅರ್ಜುನ್ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದರು.