ಗುಜರಾತ್ ವಿಧಾನಸಭೆಯಿಂದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಉಚ್ಚಾಟನೆ
ಗಾಂಧಿನಗರ: ಗುಜರಾತ್ ವಿಧಾನಸಭಾ ಕಲಾಪದ ಕೊನೆಯ ದಿನವಾದ ಇಂದು ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕೆ ಹಾಗೂ ಚರ್ಚೆಯ ಸಂದರ್ಭದಲ್ಲಿ ಸದನದ ಬಾವಿಯನ್ನು ಪ್ರವೇಶಿಸಿದ್ದಕ್ಕೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರು ಉಚ್ಚಾಟನೆ ಮಾಡಿದರು.
ಜಿಗ್ನೇಶ್ ಮೇವಾನಿಯನ್ನು ಸದನದಿಂದ ಹೊರ ಹಾಕುವಂತೆ ಸ್ಪೀಕರ್ ನೀಡಿದ ಸೂಚನೆಯ ಮೇರೆಗೆ ಭದ್ರತಾ ಸಿಬ್ಬಂದಿಗಳು ಯಾವುದೇ ಬಲ ಪ್ರಯೋಗವಿಲ್ಲದೆ ಜಿಗ್ನೇಶ್ ಮೇವಾನಿಯವರನ್ನು ಸದನದಿಂದ ಹೊರ ಹಾಕಿದರು.
ಗುಜರಾತ್ ಪೊಲೀಸರು ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮೇಲೆದ್ದು ನಿಂತ ಶಾಸಕ ಮೇವಾನಿ, ಖಜಾಂಚಿ ಮೇಜುಗಳೆಡೆಗೆ ಕೂಗಿದರಲ್ಲದೆ, ಬಿಜೆಪಿ ಸರಕಾರವು ಜ್ವಲಂತ ಸಮಸ್ಯೆಯಾದ ಅತ್ಯಾಚಾರದ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದಾದ ನಂತರ ಸದನದ ಬಾವಿಯೆಡೆಗೆ ಧಾವಿಸಿದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ರಾಜ್ ಕೋಟ್ ಗೇಮ್ ಝೋನ್ ಅಗ್ನಿ ದುರಂತ, ಮೋರ್ಬಿ ಸೇತುವೆ ಕುಸಿತ ಹಾಗೂ ವಡೋದರದಲ್ಲಿ ದೋಣಿ ಮಗುಚಿಕೊಂಡ ಘಟನೆಗಳ ಕುರಿತು ಚರ್ಚೆ ನಡೆಸುವಂತೆ ರಾಜ್ಯ ಗೃಹ ಸಚಿವ ಹರ್ಷ್ ಸಾಂಘವಿ ಅವರಿಗೆ ಸವಾಲೆಸೆದರು.
ಸದನದ ನಿಯಮಗಳನ್ನು ಪಾಲಿಸುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ, ಶಾಸಕ ಜಿಗ್ನೇಶ್ ಮೇವಾನಿ ಮಾತ್ರ ತಮ್ಮ ಪೀಠದ ಬಳಿ ನಿಂತುಕೊಂಡು ಈ ಕುರಿತು ಚರ್ಚೆಗಾಗಿ ಆಗ್ರಹಿಸಿದರು. ಹೀಗಾಗಿ ಸ್ಪೀಕರ್ ಶಂಕರ್ ಚೌಧರಿ ಅವರು ಜಿಗ್ನೇಶ್ ಮೇವಾನಿ ಅವರನ್ನು ಸದನದಿಂದ ಹೊರ ಹಾಕುವಂತೆ ವಿಧಾನಸಭಾ ಭದ್ರತಾ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ಮೇವಾನಿಯ ವರ್ತನೆಯನ್ನು ಖಂಡಿಸಿದ ಸ್ಪೀಕರ್ ಶಂಕರ್ ಚೌಧರಿ, ಇಂತಹ ವರ್ತನೆಗಳ ಮೂಲಕ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಸಂವಿಧಾನಕ್ಕೆ ಅಗೌರವ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.