ಮಹಾರಾಷ್ಟ್ರ | ವಿವಿಪ್ಯಾಟ್ ಸ್ಲಿಪ್ ಗಳ 100% ಎಣಿಕೆಗೆ ಪೃಥ್ವಿರಾಜ್ ಚವಾಣ್ ಆಗ್ರಹ
ಪುಣೆ: ಮತ ಎಣಿಕೆ ವೇಳೆ ವಿವಿಪ್ಯಾಟ್ ಸ್ಲಿಪ್ ಗಳನ್ನು ಶೇಕಡಾ 100ರಷ್ಟು ಎಣಿಕೆ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪೃಥ್ವಿರಾಜ್ ಚವಾಣ್ ಕರಾಡ್ ದಕ್ಷಿಣದಿಂದ ಬಿಜೆಪಿಯ ಅತುಲ್ ಸುರೇಶ್ ಭೋಸ್ಲೆ ವಿರುದ್ಧ 39,355 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
ಇವಿಎಂ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ಸಾಮಾಜಿಕ ಕಾರ್ಯಕರ್ತ ಬಾಬಾ ಅಧವ್ ಅವರನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ವಿಧಾನಸಭಾ ಚುನಾವಣೆ ಫಲಿತಾಂಶ ಅನಿರೀಕ್ಷಿತ. ಆರು ತಿಂಗಳ ಹಿಂದೆ, ನಾವು ಲೋಕಸಭೆ ಚುನಾವಣೆಯಲ್ಲಿ ಯಶಸ್ಸನ್ನು ಕಂಡಿದ್ದೆವು. ಆದರೆ ಕಡಿಮೆ ಕಾಲಾವಧಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶಗಳು ವಿಭಿನ್ನವಾಗಿವೆ ಎಂದು ಹೇಳಿದ್ದಾರೆ.
ಈಗಾಗಲೇ ಹಲವು ವ್ಯಕ್ತಿಗಳು ಬ್ಯಾಲೆಟ್ ಪೇಪರ್ ಗಳ ಮೂಲಕ ಚುನಾವಣೆಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಯೊಂದು ವಿವಿಪ್ಯಾಟ್ ಸ್ಲಿಪ್ ಅನ್ನು ಎಣಿಕೆ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಮಹಾರಾಷ್ಟ್ರ ಚುನಾವಣೆಯ ಬಳಿಕ ನಾವು ಭಾರತದ ಚುನಾವಣಾ ಆಯೋಗದೊಂದಿಗೆ ಸಭೆಯನ್ನು ನಿಗದಿಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಚುನಾವಣಾ ಆಯೋಗ ನಮ್ಮೊಂದಿಗೆ ಏನು ಚರ್ಚಿಸುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಪ್ರತಿ ವಿವಿಪ್ಯಾಟ್ ಸ್ಲಿಪ್ ಗಳನ್ನು ಎಣಿಸಲು ನಾನು ಒತ್ತಾಯಿಸುತ್ತೇನೆ. ಚುನಾವಣಾ ಆಯೋಗವು ಏನನ್ನಾದರೂ ಮರೆಮಾಡಲು ಬಯಸುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಬಲವಾದ ಬದಲಾವಣೆಯ ಅವಶ್ಯಕತೆಯಿದೆ. ನಾನು ಪ್ರತಿಭಟನೆ ನಡೆಸುತ್ತಿರುವ ಬಾಬಾ ಅಧವ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.