ಕ್ಷೇತ್ರ ಮರುವಿಂಗಡಣೆ ಸಮಿತಿ ರಚನೆ: ತುರ್ತು ನಿರ್ಧಾರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ 2001ರ ಬಳಿಕ ಹಲವು ಸಮುದಾಯಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್ಸಿ/ಎಸ್ಟಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕೇ ಎಂದು ನಿರ್ಧರಿಸುವ ಸಲುವಾಗಿ ತಕ್ಷಣ ಕ್ಷೇತ್ರ ಮರುವಿಂಗಡಣೆ ಸಮಿತಿ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಂವಿಧಾನದ 330 ಮತ್ತು 332ನೇ ವಿಧಿಗಳ ಉದ್ದೇಶವನ್ನು ಖಾತರಿಪಡಿಸುವ ಸಲುವಾಗಿ 2002ರ ಕ್ಷೇತ್ರ ಪುನರ್ ವಿಂಗಡಣೆ ಸಮಿತಿ ಕಾಯ್ದೆಯಡಿ ತಕ್ಷಣ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
2001ರ ಬಳಿಕ 2011ರ ಜನಗಣತಿ ವರೆಗೆ ಎಸ್ಟಿ ಸಮುದಾಯಕ್ಕೆ ಸುಮಾರು 51 ಸಮುದಾಯಗಳನ್ನು ಸೇರಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದಾಗ, ಪರಿಶಿಷ್ಟ ಜಾತಿ ಪಟ್ಟಿಗೂ ಹಲವು ಸಮುದಾಯಗಳನ್ನು ಸೇರಿಸಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ-2002ರ ಅನ್ವಯ ಮರು ವಿಂಗಡಣೆಗೆ ಕ್ರಮ ಕೈಗೊಳ್ಳದಿದ್ದರೆ, ಸಂವಿಧಾನದ 330 ಹಾಗೂ 332ನೇ ವಿಧಿಗಳ ಅನ್ವಯ ಹೊಸದಾಗಿ ಈ ಪಟ್ಟಿಗಳಿಗೆ ಸೇರಿದ ಸಮುದಾಯಗಳಿಗೆ ರಾಜಕೀಯ ಪ್ರಾನಿತಿಧ್ಯ ಸಿಗುವುದಿಲ್ಲ ಎಂದು ಎಸ್ಸಿ/ಎಸ್ಟಿಗಳಿಗೆ ಶಾಸನಸಭೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮಾಡುವ ಸಂವಿಧಾನಬದ್ಧತೆ ಸರ್ಕಾರಕ್ಕೆ ಇದೆ ಎಂದು ನ್ಯಾಯಪೀಠ ಹೇಳಿತು.