ರೈತರ ಕುಂದುಕೊರತೆಗಳ ಸರ್ವಸಮ್ಮತ ಪರಿಹಾರಕ್ಕೆ ಸಮಿತಿ ರಚನೆ : ಸುಪ್ರೀಂ ಕೋರ್ಟ್
ಶ್ರೀನಗರ : ರೈತರ ಎಲ್ಲಾ ಕಾಲದ ಕುಂದುಕೊರತೆಗಳನ್ನು ಸರ್ವಸಮ್ಮತವಾಗಿ ಪರಿಹರಿಸಲು ಬಹು ಸದಸ್ಯರ ಸಮಿತಿಯೊಂದನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 2ಕ್ಕೆ ನಿಗದಿಪಡಿಸಿತು. ಅಲ್ಲದೆ, ರೈತರಿಗೆ ಸಂಬಂಧಿಸಿದ ತಾತ್ಕಾಲಿಕ ಸಮಸ್ಯೆಗಳನ್ನು ಸಮಿತಿಯ ಗಮನಕ್ಕೆ ತನ್ನಿ ಎಂದು ಪಂಜಾಬ್ ಹಾಗೂ ಹರ್ಯಾಣ ಸರಕಾರಕ್ಕೆ ಸೂಚಿಸಿತು.
ಸರ್ವೋಚ್ಛ ನ್ಯಾಯಾಲಯ ಆಗಸ್ಟ್ 12ರಂದು ನೀಡಿದ ಆದೇಶಕ್ಕೆ ಅನುಗುಣವಾಗಿ ಪ್ರತಿಭಟನೆ ನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರು ಹೆದ್ದಾರಿ ತಡೆಯನ್ನು ಆಂಶಿಕ ತೆರೆಯುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಂಜಾಬ್ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸಂಪರ್ಕದಲ್ಲಿ ಇರಿ. ಹೆದ್ದಾರಿಯಿಂದ ಟ್ರಾಕ್ಟರ್ ಹಾಗೂ ಟ್ರೋಲಿಗಳನ್ನು ತೆಗೆಯುವಂತೆ ಅವರ ಮನವೊಲಿಸಿ ಎಂದು ಪೀಠ ಪಂಜಾಬ್ ಹಾಗೂ ಹರ್ಯಾಣ ಸರಕಾರಕ್ಕೆ ಸೂಚಿಸಿತು.