ಯುಸಿಸಿ, ರಾಮ ಮಂದಿರ ಕುರಿತು ವಿವಾದಾತ್ಮಕ ಹೇಳಿಕೆ | ನ್ಯಾ.ಯಾದವ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಿದ ಇಂಡಿಯಾ ಮೈತ್ರಿಕೂಟ

Update: 2024-12-11 16:12 GMT

ನ್ಯಾ.ಶೇಖರ ಯಾದವ | PC ; X \ @barandbench

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಂಸದರು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಶೇಖರ ಯಾದವ ಅವರು ದ್ವೇಷ ಭಾಷಣ ಮತ್ತು ರಾಜಕೀಯ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಸಂಸದರು ರಾಜ್ಯಸಭೆಯಲ್ಲಿ ಮಂಡಿಸಲು ವಾಗ್ದಂಡನೆ ನಿರ್ಣಯವನ್ನು ಸಿದ್ಧಪಡಿಸಿದ್ದಾರೆ ಮತ್ತು ಶೀಘ್ರವೇ ಅದನ್ನು ಸಲ್ಲಿಸಲು ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಬುಧವಾರ ತಿಳಿಸಿದವು.

ರಾಜ್ಯಸಭೆಯಲ್ಲಿ ವಾಗ್ದಂಡನೆ ನಿರ್ಣಯವನ್ನು ಅಂಗೀಕಾರಕ್ಕಾಗಿ ಪರಿಗಣಿಸಲು ಕನಿಷ್ಠ 50 ಸಂಸದರ ಸಹಿಗಳು ಅಗತ್ಯವಾಗಿವೆ.

ಕಪಿಲ ಸಿಬಲ್,ವಿವೇಕ ತಂಖಾ ಮತ್ತು ರೇಣುಕಾ ಚೌಧುರಿ(ಕಾಂಗ್ರೆಸ್), ಎಂ.ಕೆ.ಝಾ(ಆರ್‌ಜೆಡಿ),ಜಾನ್ ಬ್ರಿಟ್ಟಾಸ್,ವಿ.ಶಿವದಾಸನ್ ಮತ್ತು ಎ.ಎ.ರಹೀಂ(ಸಿಪಿಎಂ),ಪಿ.ಸಂದೋಷ ಕುಮಾರ ಮತ್ತು ಪಿ.ಪಿ.ಸುನೀರ್(ಸಿಪಿಐ),ಸಾಕೇತ ಗೋಖಲೆ(ಟಿಎಂಸಿ) ಮತ್ತು ಜೋಸ್ ಕೆ.ಮಣಿ(ಕೇರಳ ಕಾಂಗ್ರೆಸ್-ಎಂ) ಅವರಂತಹ ಹಿರಿಯ ಸಂಸದರು ನಿರ್ಣಯಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಡಿ.8ರಂದು ವಿಹಿಂಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ.ಯಾದವ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ವಿವರಗಳನ್ನು ಕೇಳಿದೆ.

ವಾಗ್ದಂಡನೆ ನಿರ್ಣಯದಲ್ಲಿ ನ್ಯಾ.ಯಾದವ ವಿರುದ್ಧ ಮೂರು ಆರೋಪಗಳನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿದವು.

ನ್ಯಾ.ಯಾದವ ಅವರು ದೇಶವು ತನ್ನ ಬಹುಸಂಖ್ಯಾತ ಜನರ ಆಶಯದಂತೆ ನಡೆಯುತ್ತದೆ ಎಂಬ ಹೇಳಿಕೆಯ ಮೂಲಕ ದ್ವೇಷ ಭಾಷಣ ಮಾಡಿದ್ದಾರೆ ಮತ್ತು ಕೋಮು ಅಸಾಮರಸ್ಯವನ್ನು ಪ್ರಚೋದಿಸಿದ್ದಾರೆ,ಮುಸ್ಲಿಮ್ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಮತ್ತು ಸಾರ್ವಜನಿಕವಾಗಿ ರಾಜಕೀಯ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News