ಲ್ಯಾಂಡಿಂಗ್ ಪಾಯಿಂಟ್ ಕೇಂದ್ರದ ಹೆಸರಿನ ಬಗ್ಗೆ ವಿವಾದ ಅನಗತ್ಯ: ಇಸ್ರೊ ಮುಖ್ಯಸ್ಥ
ಕೊಚ್ಚಿನ್: ''ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ಮಿಷನ್ ನ ಲ್ಯಾಂಡರ್ ಇಳಿದ ಜಾಗಕ್ಕೆ 'ಶಿವಶಕ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟ ಬಗ್ಗೆ ಯಾವುದೇ ವಿವಾದ ಅನಗತ್ಯ'' ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಪ್ರತಿಪಾದಿಸಿದ್ದಾರೆ. ಇದರ ಅರ್ಥ ಎಲ್ಲ ಬಗೆಯಲ್ಲೂ ಎಲ್ಲರಿಗೂ ಹೊಂದುವಂಥದ್ದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
"ಆ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡುವ ವಿವರಣೆಯೆಂದರೆ, ಶಿವ ಪುರುಷ ಹಾಗೂ ಮಹಿಳೆಯರ ಸಮ್ಮಿಲನ. ಇಸ್ರೋದಲ್ಲಿ ಮಹಿಳೆಯರ ಕೊಡುಗೆ ಕೂಡಾ ಇದ್ದು, ಸಂಸ್ಥೆಯಲ್ಲಿ ಅಂಥ ವಾತಾವರಣ ನಿರ್ಮಿಸುವ ಅಗತ್ಯವಿದೆ. ಆದ್ದರಿಂದ ಎಲ್ಲರಿಗೆ ಸೂಕ್ತವಾಗುವ ರೀತಿಯಲ್ಲಿ ಪ್ರಧಾನಿ ಈ ಅರ್ಥ ವಿವರಣೆ ನೀಡಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಮುಂದೆ 'ತಿರಂಗಾ' ಎಂಬ ಹೆಸರನ್ನೂ ಅವರು ನೀಡಿದ್ದಾರೆ. ಎರಡೂ ಭಾರತೀಯತೆಯನ್ನು ಬಿಂಬಿಸವ ಹೆಸರು. ದೇಶದ ಪ್ರಧಾನಿಯಾಗಿ ನಾಮಕರಣ ಮಾಡುವ ಅಧಿಕಾರ ಅವರಿಗಿದೆ" ಎಂದು ಸೋಮನಾಥನ್ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ ಮಾತನಾಡಿ, ಚಂದ್ರಯಾನ-3 ಮಿಷನ್ ನ ವಿಕ್ರಮ್ ಸುಲಲಿತವಾಗಿ ಚಂದ್ರನ ಮೇಲೆ ಇಳಿದ ಜಾಗಕ್ಕೆ 'ಶಿವಶಕ್ತಿ' ಎಂಬುದಾಗಿ ನಾಮಕರಣ ಮಾಡಿದ್ದರು. ಚಂದ್ರಯಾನ-2 ಅಪಘಾತಕ್ಕೀಡಾದ ಸ್ಥಳವನ್ನು 'ತಿರಂಗಾ' ಎಂದು ಹೆಸರಿಸಿದ್ದರು.
ಇಂಥ ಅದ್ಭುತ ಸಾಧನೆ ಮಾಡಿದಾಗ ಚಂದ್ರನ ಮೇಲೆ ನಮ್ಮ ಹೆಸರಿಡುವುದು ಹೊಸದೇನಲ್ಲ. ಇತರ ದೇಶಗಳು ಕೂಡಾ ತಾವು ತಲುಪಿದ ಸ್ಥಳಕ್ಕೆ ಇಂಥ ಹೆಸರು ಇಟ್ಟಿವೆ ಎಂದು ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.