ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣ; 2 ಕೋಟಿ ರೂ. ಠೇವಣಿಯಿಡಿ : ಎ.ಆರ್.ರಹಮಾನ್‌ ಗೆ ದಿಲ್ಲಿ ಹೈಕೋರ್ಟ್ ನಿರ್ದೇಶನ

Update: 2025-04-25 22:37 IST
ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣ; 2 ಕೋಟಿ ರೂ. ಠೇವಣಿಯಿಡಿ : ಎ.ಆರ್.ರಹಮಾನ್‌ ಗೆ ದಿಲ್ಲಿ ಹೈಕೋರ್ಟ್ ನಿರ್ದೇಶನ

 ಎ.ಆರ್.ರಹಮಾನ್‌ | PTI 

  • whatsapp icon

ಹೊಸದಿಲ್ಲಿ: ಪೊನ್ನಿಯನ್ ಸೆಲ್ವನ್ 2 ಚಿತ್ರದ ‘ವೀರ ರಾಜಾ ವೀರ’ ಹಾಡಿಗೆ ಸಂಬಂಧಿಸಿದ ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಎರಡು ಕೋಟಿ ರೂ.ಗಳನ್ನು ಠೇವಣಿಯಿರಿಸುವಂತೆ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಮತ್ತು ನಿರ್ಮಾಣ ಸಂಸ್ಥೆ ಮದ್ರಾಸ್ ಟಾಕೀಸ್‌ಗೆ ಶುಕ್ರವಾರ ನಿರ್ದೇಶನ ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯವು, ಎರಡು ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಜ್ಯೂನಿಯರ್ ಡಾಗರ್ ಬ್ರದರ್ಸ್ ಎಂದೇ ಜನಪ್ರಿಯರಾಗಿದ್ದ ತನ್ನ ತಂದೆ ನಾಸಿರ್ ಫೈಯಾಝುದ್ದೀನ್ ಡಾಗರ್ ಮತ್ತು ಚಿಕ್ಕಪ್ಪ ಝಹೀರುದ್ದೀನ್ ಡಾಗರ್ ಅವರು ಸಂಯೋಜಿಸಿದ್ದ ಶಿವ ಸ್ತುತಿ ಗೀತೆಯಿಂದ ವೀರ ರಾಜಾ ವೀರ ಹಾಡನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿ ಶಾಸ್ತ್ರೀಯ ಸಂಗೀತಕಾರ ಹಾಗೂ ಪದ್ಮಶ್ರೀ ಪುರಸ್ಕೃತ ಫೈಯಾಝ್ ವಸಿಫುದ್ದೀನ್ ಡಾಗರ್ ಅವರು 2023ರಲ್ಲಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ರಹಮಾನ್ ಮತ್ತು ಮದ್ರಾಸ್ ಟಾಕೀಸ್ ಸೇರಿದಂತೆ ಪ್ರತಿವಾದಿಗಳು ಹಾಡನ್ನು ಬಳಸುವುದನ್ನು ನಿರ್ಬಂಧಿಸಿ ಕಾಯಂ ತಡೆಯಾಜ್ಞೆಯನ್ನು ಹೊರಡಿಸುವಂತೆ ಅರ್ಜಿಯಲ್ಲಿ ಕೋರಿದ್ದ ಡಾಗರ್, ನಷ್ಟ ಪರಿಹಾರವನ್ನೂ ಕೇಳಿದ್ದರು.

ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ವೀರ ರಾಜಾ ವೀರ ಹಾಡು ಶಿವ ಸ್ತುತಿಯನ್ನೇ ಆಧರಿಸಿಲ್ಲ ಅಥವಾ ಪ್ರೇರೇಪಿತವಾಗಿಲ್ಲ,ಆದರೆ ಕೆಲವು ಬದಲಾವಣೆಗಳೊಂದಿಗೆ ಅದನ್ನೇ ಹೋಲುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯು ನಡೆಯುತ್ತಿರುವಂತೆ ಎರಡು ಕೋಟಿ ರೂ.ಗಳನ್ನು ಠೇವಣಿ ಮಾಡುವಂತೆ ರಹಮಾನ್ ಮತ್ತು ಮದ್ರಾಸ್ ಟಾಕೀಸ್‌ಗೆ ಆದೇಶಿಸಿತು.

ಗೀತೆ ರಚನೆಯು ಭಿನ್ನವಾಗಿದ್ದರೂ ಸಂಗೀತ ಸಂಯೋಜನೆಯಲ್ಲಿ ವೀರ ರಾಜಾ ವೀರ ಹಾಡು ಶಿವ ಸ್ತುತಿಯನ್ನು ಹೋಲುತ್ತದೆ ಎಂದು ಡಾಗರ್ ಪ್ರತಿಪಾದಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ರಹಮಾನ್ ಅವರು,ಶಿವ ಸ್ತುತಿಯು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಧ್ರುಪದ್ ಘರಾಣೆಯ ಸಾಂಪ್ರದಾಯಿಕ ಸಂಯೋಜನೆಯಾಗಿದ್ದು,ಅದು ಸಾರ್ವಜನಿಕ ವಲಯದಲ್ಲಿದೆ. ವೀರ ರಾಜಾ ವೀರ ಕೂಡ ಮೂಲ ಕೃತಿಯಾಗಿದ್ದು,227 ವಿಭಿನ್ನ ಪದರಗಳೊಂದಿಗೆ ಪಾಶ್ಚಾತ್ಯ ಸಂಗೀತದ ಮೂಲಭೂತ ಅಂಶಗಳನ್ನು ಬಳಸಿ ಸಂಯೋಜಿಸಲಾಗಿದೆ ಎಂದು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News