ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಮರುಜೀವ | ಹೈಕೋರ್ಟ್ ಆದೇಶದ ವಿರುದ್ಧ ಬಿ ಎಸ್ ವೈ ಅರ್ಜಿ ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್, ಬಿ.ಎಸ್.ಯಡಿಯೂರಪ್ಪ | PC : NDTV
ಹೊಸದಿಲ್ಲಿ: ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಪುನರುಜ್ಜೀವ ನೀಡುವ ಕುರಿತ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಬೆಂಗಳೂರು ಮೂಲದ ದೂರುದಾರ ಎ. ಆಲಂ ಪಾಶಾ ಅವರು 2021ರ ಜನವರಿ 5ರಂದು ಸಲ್ಲಿಸಿದ್ದ ದೂರನ್ನು ಪುನರುಜ್ಜೀವಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು.
ಯಡಿಯೂರಪ್ಪ ಹಾಗೂ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯ ಮಾಜಿ ಆಡಳಿತ ನಿರ್ದೇಶಕ ಶಿವಸ್ವಾಮಿ ಕೆ.ಎಸ್.ವಿರುದ್ಧ ಪಾಶಾ ಅವರು ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಿದ್ದರು.
ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತನಗೆ 26 ಎಕರೆ ಜಮೀನು ವಿತರಿಸಲು ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ ಅನುಮೋದನೆಯನ್ನು ರದ್ದುಪಡಿಸಲು ಯಡಿಯೂರಪ್ಪ ಮತ್ತಿತರರು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಂಚು ಹೂಡಿದ್ದರೆಂದು ಪಾಶಾ ದೂರು ನೀಡಿದ್ದರು.
ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಆನಂತರ ಆರೋಪಿಗಳು ಸಾರ್ವಜನಿಕ ಹುದ್ದೆಯಲ್ಲಿರುವುದರಿಂದ ಈ ದೂರನ್ನು ಸ್ವೀಕರಿಸಲು ದಂಡಸಂಹಿತೆಯ ಸೆಕ್ಷನ್ 19 ಅನುಮತಿ ನೀಡುವುದಿಲ್ಲವೆಂದು ಪ್ರತಿಪಾದಿಸಿದ ಹೈಕೋರ್ಟ್ 2013ರಲ್ಲಿ ಅರ್ಜಿಯನ್ನು ರದ್ದುಪಡಿಸಿತ್ತು.
ಆರೋಪಿಗಳು ತಮ್ಮ ಹುದ್ದೆಗಳಿಂದ ನಿರ್ಗಮಿಸಿದ ಬಳಿಕ, ಪಾಶಾ ಹೊಸದಾಗಿ ಅರ್ಜಿ ಸಲ್ಲಿಸಿದ್ದರು. ಎ.ಆರ್. ಅಂತುಳೆ ಪ್ರಕರಣದಲ್ಲಿಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಸರಕಾರದ ಅನುಮತಿಯ ಅಗತ್ಯವಿರುವುದಿಲ್ಲವೆಂದು ತಿಳಿಸಿದ್ದರು.
2016ರಲ್ಲಿ ವಿಶೇಷ ನ್ಯಾಯಾಧೀಶರು ಎರಡನೇ ದೂರನ್ನು ಕೂಡಾ ತಿರಸ್ಕರಿಸಿದ್ದರು.ಅರ್ಜಿಯನ್ನು ವಜಾಗೊಳಿಸಿತ್ತು.
ಅರ್ಜಿಯ ವಜಾವನ್ನು ಪ್ರಶ್ನಿಸಿ ಪಾಶಾ ಅವರು ಹೈಕೋರ್ಟ್ ಮೆಟ್ಟಲೇರಿದಾಗ, ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತ್ತು ಹಾಗೂ ಪ್ರಕರಣದ ತನಿಖೆಯ ಪುನರುಜ್ಜೀವಕ್ಕೆ ಸಮ್ಮತಿಸಿತ್ತು.
ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.