ತಮಿಳುನಾಡಿನ 10 ಮಂದಿ ಉದಯೋನ್ಮುಖ ಕ್ರೀಡಾಪಟುಗಳಿಗೆ 70 ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಿದ ಕ್ರಿಕೆಟಿಗ ಶಿವಂ ದುಬೆ

ಶಿವಂ ದುಬೆ | PC : PTI
ಚೆನ್ನೈ: ಮಂಗಳವಾರ ಹೃದಯವನ್ನು ಆರ್ದಗೊಳಿಸುವ ನಡವಳಿಕೆಯನ್ನು ಪ್ರದರ್ಶಿಸಿರುವ ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಶಿವಂ ದುಬೆ, ತಮಿಳುನಾಡಿನ 10 ಮಂದಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತಲಾ 70,000 ರೂ. ಪ್ರೋತ್ಸಾಹ ಧನ ಪ್ರಕಟಿಸಿದ್ದಾರೆ.
ಮಂಗಳವಾರ ನಡೆದ ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘದ ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿವೇತನ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರೂ ಆದ ಶಿವಂ ದುಬೆ ಈ ಹೃದಯವನ್ನು ಬೆಚ್ಚಗಾಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮಿಳುನಾಡಿನ 10 ಮಂದಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘ ಕೊಡಮಾಡುತ್ತಿರುವ 30,000 ರೂ. ವಿದ್ಯಾರ್ಥಿ ವೇತನದೊಂದಿಗೆ ಈ ಪ್ರೋತ್ಸಾಹ ಧನವನ್ನು ಶಿವಂ ದುಬೆ ಪ್ರಕಟಿಸಿದ್ದಾರೆ.
“ತಂಡ ಉಳಿದುಕೊಂಡಿರುವ ಹೋಟೆಲ್ ನಿಂದ ನಾನು ಈ ಸ್ಥಳಕ್ಕೆ ಪ್ರಯಾಣಿಸುವಾಗ, ಇಲ್ಲಿನ ಕೆಲ ಯುವ ಆಟಗಾರರಿಗೆ ನೆರವು ನೀಡುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಡಾ. ಬಾಬಾ ನನಗೆ ತಿಳಿಸಿದರು. ಹೀಗಾಗಿ, ಇದು ಎಲ್ಲ ಯುವ ಆಟಗಾರರ ಪಾಲಿಗೆ ನಿಜವಾಗಿಯೂ ಉತ್ತೇಜನಕಾರಿಯಾಗಿದೆ” ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಕೂಡಾ ಉಪಸ್ಥಿತರಿದ್ದ ಸಮಾರಂಭದಲ್ಲಿ ಶಿವಂ ದುಬೆ ಪ್ರಶಂಸಿಸಿದ್ದಾರೆ.
ಇಂತಹ ಪ್ರಶಸ್ತಿಗಳು ಸ್ವರೂಪದಲ್ಲಿ ಸಣ್ಣವಾಗಿದ್ದರೂ, ಯುವ ಕ್ರಿಕೆಟಿಗರು ದೇಶಕ್ಕೆ ಗೆಲುವು ತರಲು ಸ್ಫೂರ್ತಿಯಾಗಿ ಕೆಲಸ ಮಾಡಲಿವೆ ಎಂದು 2024ರ ಟಿ20 ವಿಶ್ವ ಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದ ಶಿವಂ ದುಬೆ ಅಭಿಪ್ರಾಯಪಟ್ಟರು.
ಈ ಸಮಾರಂಭದಲ್ಲಿ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳಾದ ಪಿ.ಬಿ.ಅಭಿನಂದ್ (ಟೇಬಲ್ ಟೆನಿಸ್), ಕೆ.ಎಸ್.ವೆನಿಸಾ ಶ್ರೀ (ಬಿಲ್ಲುಗಾರಿಕೆ), ಶಮೀನಾ ರಿಯಾಝ್ (ಸ್ಕ್ವಾಶ್), ಜಯಂತ್ ಆರ್.ಕೆ., ಎಸ್.ನಂದನಾ (ಇಬ್ಬರೂ ಕ್ರಿಕೆಟಿಗರು), ಕಮಲಿ ಪಿ. (ಸರ್ಫಿಂಗ್), ಆರ್. ಅಭಿನಯ, ಆರ್.ಸಿ. ಜಿತಿನ್ ಅರ್ಜುನನ್ (ಇಬ್ಬರೂ ಅಥ್ಲೀಟ್ ಗಳು) ಹಾಗೂ ಎ.ತಕ್ಷಾಂತ್ (ಚೆಸ್) ಅವರಿಗೆ ವಿದ್ಯಾರ್ಥಿ ವೇತನವನ್ನು ಪ್ರದಾನ ಮಾಡಲಾಯಿತು