ಮೋದಿ ಸರಕಾರದಿಂದ ರೈಲ್ವೆ ಇಲಾಖೆಯ ಕ್ರಿಮಿನಲ್ ಕಡೆಗಣನೆ : ಅಶ್ವಿನಿ ವೈಷ್ಣವ್ ರಾಜಿನಾಮೆಗೆ ವಿರೋಧ ಪಕ್ಷಗಳ ಪಟ್ಟು

Update: 2024-06-18 14:21 GMT

PC : PTI 

ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ಮೂರನೆಯ ಪ್ರಮುಖ ರೈಲ್ವೆ ದುರ್ಘಟನೆಯಾಗಿರುವ ಪಶ್ಚಿಮ ಬಂಗಾಳದ ರೈಲ್ವೆ ಅಪಘಾತವು ರಾಜಕೀಯ ವಲಯದಲ್ಲಿ ವಿವಾದದ ಬಿರುಗಾಳಿಯೆಬ್ಬಿಸಿದ್ದು, ಪ್ರಧಾನಿ ನರೇಂದ್ರ ಮೋದಿಯೊಂದಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಘಟನೆಯ ಹೊಣೆಗಾರಿಕೆ ಹೊತ್ತುಕೊಂಡು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಸಂಸದ ಹಾಗೂ ಆಪ್ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್, “ಮೊದಲಿಗೆ ಎರಡೂ ರೈಲುಗಳು ಒಂದೇ ಹಳಿಯ ಮೇಲೆ ಓಡುತ್ತಿದ್ದವು ಎಂದು ಹೇಳಲಾಯಿತು. ಅಂದ ಮೇಲೆ ಸಿಗ್ನಲ್ ವ್ಯವಸ್ಥೆ ವಿಫಲವಾಗಿತ್ತೊ ಅಥವಾ ಮನುಷ್ಯರ ತಪ್ಪು ನುಸುಳಿತ್ತೊ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರವು ರೈಲ್ವೆ ಸಚಿವಾಲಯವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ. ಜವಾಬ್ದಾರಿಯುತ ವಿರೋಧ ಪಕ್ಷಗಳಾಗಿ ಮೋದಿ ಸರಕಾರವು ಹೇಗೆ ರೈಲ್ವೆ ಸಚಿವಾಲಯವನ್ನು ಕ್ಯಾಮೆರಾ ಚಾಲಿತ ಸ್ವಯಂ ಪ್ರಚಾರದ ವೇದಿಕೆಯನ್ನಾಗಿಸಿದೆ ಎಂಬುದನ್ನು ಎತ್ತಿ ತೋರಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಆರ್‌ ಜೆ ಡಿ, ಸಿಪಿಎಂ ಹಾಗೂ ಸಿಪಿಐಎಂಎಲ್ ಕೂಡಾ ರೈಲ್ವೆ ಸಚಿವಾಲಯದ ನಿರ್ಲಕ್ಷ್ಯವನ್ನು ಖಂಡಿಸಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿವೆ.

ಇದಕ್ಕೂ ಮುನ್ನ, ರೈಲ್ವೆ ಅಪಘಾತ ಸಂಭವಿಸಿದ್ದಾಗ 1956ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ 1999ರಲ್ಲಿ ನಿತೀಶ್ ಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಕಳೆದ ಒಂದು ವರ್ಷದಲ್ಲೇ ಒಡಿಶಾದ ಬಾಲಸೋರ್ ಸೇರಿದಂತೆ ಒಟ್ಟು ಮೂರು ಪ್ರಮುಖ ಅಪಘಾತಗಳು ಸಂಭವಿಸಿದ್ದರೂ, ನರೇಂದ್ರ ಮೋದಿ ಸರಕಾರದಲ್ಲಿ ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ ರಿಂದ ಇದುವರೆಗೂ ರಾಜೀನಾಮೆಯ ಪ್ರಸ್ತಾಪ ಪ್ರಕಟಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News