ಅಡ್ಡ ಮತದಾನ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಕಾಂಗ್ರೆಸ್, ಒಬ್ಬರು ಅದೇ ದಿನ ಬಿಜೆಪಿ ಸೇರ್ಪಡೆ

Update: 2024-08-31 02:31 GMT

PC: x.com/AshokChavan1958

ಮುಂಬೈ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಂತದಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಶುಕ್ರವಾರ ಪಕ್ಷದ ಇಬ್ಬರು ಶಾಸಕರನ್ನು, ವಿಧಾನ ಪರಿಷತ್ ಚುಣಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದಲ್ಲಿ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಉಚ್ಚಾಟಿತ ಸದಸ್ಯರಾದ ಜಿತೇಶ್ ಅಂತಪುರ್‌ ಕರ್ ಮತ್ತು ಝೀಶನ್ ಸಿದ್ದೀಕಿ ಅವರ ಪೈಕಿ ಆತ್ಮರೂಪಕರ ಅದೇ ದಿನ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಭಾವಂಕುಲೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜಕೀಯ ಗುರು, ರಾಜ್ಯಸಭಾ ಸದಸ್ಯ ಅಶೋಕ್ ಚವ್ಹಾಣ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಚವ್ಹಾಣ್ ಕಳೆದ ಫೆಬ್ರುವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ರಾಜ್ಯವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಈ ಇಬ್ಬರು ಅಡ್ಡಮತದಾನ ಮಾಡಿದ್ದರು ಎನ್ನುವುದು ಆಂತರಿಕ ತನಿಖೆಯಿಂದ ತಿಳಿದುಬಂದಿತ್ತು. ಇವರ ಜತೆಗೆ ಇತರ ಐದು ಮಂದಿ ಕಾಂಗ್ರೆಸ್ ಸದಸ್ಯರು ಕೂಡಾ ಅಡ್ಡ ಮತದಾನ ಮಾಡಿದ್ದರು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬದಲು, ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ನಿರ್ಧರಿಸಲಾಗಿದೆ. ಆದರೆ ಎಐಸಿಸಿ ಅನುಮೋದನೆಯೊಂದಿಗೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲು ನಿರ್ಧರಿಸಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನ ಅವರನ್ನು ಉಚ್ಚಾಟಿಸಲಾಗುತ್ತದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಮಾಜಿ ಮೇಯರ್ ವಿಶ್ವನಾಥ್ ಮಹದೇಶ್ವರ್ ಅವರನ್ನು ಸೋಲಿಸಿ ಬಾಂದ್ರಾ ಪೂರ್ವ ಕ್ಷೇತ್ರದಿಂದ ಸಿದ್ದೀಕಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪಕ್ಕದ ನಾದೇಂಡ್ ಜಿಲ್ಲೆಯ ದೆಗಲೂರು ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಆತ್ಮರೂಪಕರ ಗೆಲವು ಸಾಧಿಸಿದ್ದರು.

ಆತ್ಮರೂಪಕರ ಅವರ ಜತೆಗೆ ಮರಾಠವಾಡ ಪ್ರದೇಶದ ಇತರ ಕೆಲ ಶಾಸಕರು ಕೂಡಾ ಅಶೋಕ್ ಚವ್ಹಾಣ್ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ವಿಧಾನಸಭೆ ಚುನಾವಣೆಗೆ ಮುನ್ನವೇ ಪಕ್ಷ ತೊರೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News