ಮಹಾರಾಷ್ಟ್ರ | ಕಬ್ಬು ಅರೆಯುವ ಅವಧಿಯಲ್ಲೇ ಚುನಾವಣೆ: 10 ಲಕ್ಷ ಮಂದಿ ಮತದಾನದಿಂದ ವಂಚಿತರಾಗುವ ಭೀತಿ

Update: 2024-11-14 05:41 GMT

ಸಾಂದರ್ಭಿಕ ಚಿತ್ರ (PTI)

ತಾಸ್‍ಗಾಂವ್ (ಸಾಂಗ್ಲಿ): ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಈ ಸಮಯದಲ್ಲಿ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಜನ ಬಟ್ಟೆ ರಾಶಿ, ಪಾತ್ರೆ ಪಗಡೆಗಳು, ತಾತ್ಕಾಲಿಕ ಡೇರೆ ಮತ್ತು ಇತರ ಅಗತ್ಯ ವಸ್ತುಗಳೊಂದಿಗೆ ಪ್ರಯಾಣಿಸುವ ದೃಶ್ಯ, ಪಶ್ಚಿಮ ಮಹಾರಾಷ್ಟ್ರದ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಅವರು ಕಬ್ಬು ಕಟಾವು ಮಾಡುವವರು. ತಮ್ಮ ಜೀವನೋಪಾಯಕ್ಕಾಗಿ 1200 ಕಿಲೋಮೀಟರ್ ದೂರದ ವರೆಗೂ ಪ್ರಯಾಣ ಬೆಳೆಸುತ್ತಾರೆ. ಈ ಬಾರಿಯ ಕಬ್ಬು ಕಟಾವು ಮತ್ತು ಕಬ್ಬು ಅರೆಯುವ ಸೀಸನ್ ಚುನಾವಣಾ ದಿನಾಂಕದ ನಡುವೆಯೇ ಬಂದಿದೆ. ಆದ್ದರಿಂದಲೇ ನಂದೂರ್‍ಬಾರ್, ಧೂಲೆ, ಬೀಡ್, ಪ್ರಭಾನಿ ಮತ್ತು ಜಲಗಾಂವ್ ಜಿಲ್ಲೆಗಳ ಇಂಥ 10 ಲಕ್ಷ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎನ್ನಲಾಗಿದೆ.

ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯದಲ್ಲಿ ಕಬ್ಬು ಅರೆಯುವ ಸೀಸನ್ ನವೆಂಬರ್ 15ರಂದು ಆರಂಭವಾಗಲಿದೆ ಎಂದು ಸಚಿವಮಟ್ಟದ ಸಮಿತಿ ಪ್ರಕಟಿಸಿತ್ತು. ಆದ್ದರಿಂದ 10 ದಿನ ಕಬ್ಬು ಕಟಾವು ದಿನಾಂಕವನ್ನು ವಿಸ್ತರಿಸುವಂತೆ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಚುನಾವಣಾ ಆಯೋಗ ಇಂಥ ಕಾರ್ಮಿಕರಿಗೆ ಮತದಾನಕ್ಕೆ ಬರಲು ಸಂಚಾರ ವ್ಯವಸ್ಥೆ ಮಾಡುವಂತೆ ಅಥವಾ ಅವರ ಕೆಲಸದ ಸ್ಥಳದ ಪಕ್ಕ ಮತಗಟ್ಟೆಗಳನ್ನು ಸ್ಥಾಪಿಸುವಂತೆ ಆಗ್ರಹಿಸಿ ಕಬ್ಬು ಕಟಾವುದಾರರ ಮತ್ತು ಸಂಚಾರ ಕಾರ್ಮಿಕರ ಸಂಘ ಹೈಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ನಾಲ್ಕು ವಾರ ಬಳಿಕ ಇದರ ವಿಚಾರಣೆಗೆ ಹೈಕೋರ್ಟ್ ದಿನಾಂಕ ಪ್ರಕಟಿಸಿದೆ.

ದೊಡ್ಡ ಸಂಖ್ಯೆಯ ಕಾರ್ಮಿಕರು ಗ್ರಾಮಗಳಿಂದ ದೂರ ಇರುವುದರಿಂದ ಬೃಹತ್ ಪ್ರಮಾಣದಲ್ಲಿ ಬೋಗಸ್ ಮತಗಳ ಚಲಾವಣೆಯಾಗುವ ಸಾಧ್ಯತೆ ಇದೆ ಎಂಬ ಭೀತಿಯನ್ನು ಅಧ್ಯಕ್ಷ ಜೀವನ್ ಹರಿಬಾಬು ರಾಥೋಡ್ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಗೆ ಜೀವನೋಪಾಯ ಮೊದಲ ಆದ್ಯತೆ. ಅವರ ಇಡೀ ಆರ್ಥಿಕತೆ ಕಟಾವು ಸೀಸನ್ ಅನ್ನು ಆಧರಿಸಿದೆ ಎನ್ನುವುದು ಕಟಾವುದಾರರೊಬ್ಬರ ಅಭಿಪ್ರಾಯ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News