ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅಬ್ಬರ: ಮನೆಯ ಮೇಲೆ ಬಂಡೆ ಉರುಳಿ ಬಿದ್ದು ಒಂದೇ ಕುಟುಂಬದ ಏಳು ಮಂದಿ ಮೃತ್ಯು

Update: 2024-12-03 10:33 GMT

ಫೆಂಗಲ್ ಚಂಡಮಾರುತ | PC : PTI 

ತಿರುವಣ್ಣಾಮಲೈ (ತಮಿಳುನಾಡು): ಫೆಂಗಲ್ ಚಂಡಮಾರುತದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಟ್ಟದ ಮೇಲಿಂದ ಉರುಳಿದ ದೊಡ್ಡ ಬಂಡೆಯೊಂದು ಮನೆಯೊಂದಕ್ಕೆ ಅಪ್ಪಳಿಸಿದ್ದರಿಂದ, ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ. ಈ ಘಟನೆಯಲ್ಲಿ ಈವರೆಗೆ ನಾಲ್ಕು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಂತ್ರಸ್ತ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಚೆನ್ನೈನ ಐಐಟಿ ತಜ್ಞರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದರೂ, ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಬೆಟ್ಟದ ಮೇಲಿರುವ ಮತ್ತೊಂದು ಬೃಹತ್ ಬಂಡೆ ಉರುಳಿ ಬೀಳುವ ಅಪಾಯ ಎದುರಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬಗೊಂಡಿದೆ.

ತೊಂದರೆಗೊಳಗಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರಗಳ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ಸದ್ಯ 147 ಪರಿಹಾರ ಶಿಬಿರಗಳಲ್ಲಿ 7,000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಈ ಎಲ್ಲ ಪರಿಹಾರ ಶಿಬಿರಗಳೂ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿ ಒಟ್ಟು 7,776 ಜನರಿಗೆ ಆಶ್ರಯ ಒದಗಿಸಲಾಗಿದೆ. ನೀರು, ಆಹಾರ ಮತ್ತು ವೈದ್ಯಕೀಯ ಪೂರೈಕೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಅವರಿಗಾಗಿ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಇದಲ್ಲದೆ, ವಿಲ್ಲುಪುರಂ ಜಿಲ್ಲೆಯಲ್ಲಿ 407 ಸಿಬ್ಬಂದಿಗಳನ್ನೊಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಏಳು ತಂಡಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಎಂಟು ತಂಡಗಳು ಸೇರಿದಂತೆ ಒಟ್ಟು 15 ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಕುದ್ದಲೋರ್ ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ 56 ಸಿಬ್ಬಂದಿಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರೆ, ತಿರುವಣ್ಣಾಮಲೈನಲ್ಲಿ 30 ಸದಸ್ಯರ ತಂಡವು ಪರಿಹಾರ ಕಾರ್ಯಾಚರಣೆಯನ್ನು ನಿಭಾಯಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News