ಮಣಿಪುರದಲ್ಲಿ ಕರಾಳ ರಾತ್ರಿ | ಡ್ರೋನ್ ದಾಳಿಗೆ ಬೆದರಿ ದೀಪಗಳನ್ನು ಆರಿಸುತ್ತಿರುವ ಜನರು!

Update: 2024-09-07 08:36 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮಣಿಪುರದ ಬಿಷ್ಣುಪುರ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳ ಹೊರವಲಯದಲ್ಲಿರುವ ನಿವಾಸಿಗಳು ಶುಕ್ರವಾರ ರಾತ್ರಿ ಅನೇಕ ಡ್ರೋನ್ ದಾಳಿಗಳು ವರದಿಯಾದ ನಂತರ ತಮ್ಮ ಮನೆಗಳ ದೀಪಗಳನ್ನು ಆರಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಎರಡು ಕಡೆ ಜನರ ಮೇಲೆ ಬಾಂಬ್‌ಗಳನ್ನು ಹಾಕಲು ದುಷ್ಕರ್ಮಿಗಳು ಡ್ರೋನ್‌ಗಳನ್ನು ಬಳಸಿದ ಇತ್ತೀಚಿನ ಘಟನೆಗಳ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಜನರ ದೊಡ್ಡ ಗುಂಪುಗಳ ಚಲನವಲನದ ಮೇಲೆ ನಿಗಾ ವಹಿಸಲು ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತೀವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಷ್ಣುಪುರ್ ಜಿಲ್ಲೆಯಲ್ಲಿ ಆಕಾಶದಲ್ಲಿ ಹಲವಾರು ಸುತ್ತಿನಲ್ಲಿ ಗುಂಡುಗಳನ್ನು ಹಾರಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭದ್ರತಾ ಪಡೆಗಳು ಅಥವಾ ಇತರರು ಗುಂಡು ಹಾರಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದ್ದರಿಂದ ಈ ಬಗ್ಗೆ ಗೊಂದಲ ಉಂಟಾಗಿದೆ.

ಶಂಕಿತ ದುಷ್ಕರ್ಮಿಗಳು ಶುಕ್ರವಾರ ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಅವರ ನಿವಾಸದ ಮೇಲೆ ರಾಕೆಟ್ ದಾಳಿಗಳನ್ನು ನಡೆಸಿದ್ದರು. ಘಟನೆಯಲ್ಲಿ ಒಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.

ಮಣಿಪುರದಲ್ಲಿ ಡ್ರೋನ್‌ಗಳನ್ನು ಆಯುಧವಾಗಿ ಬಳಸಲಾದ ಮೊದಲ ನಿದರ್ಶನವು ಸೆಪ್ಟೆಂಬರ್ 1 ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಕೌತ್ರುಕ್ ಗ್ರಾಮದಲ್ಲಿ ವರದಿಯಾಗಿತ್ತು. ದಾಳಿಯಲ್ಲಿ ಬಂದೂಕುಗಳನ್ನೂ ಬಳಸಲಾಗಿದ್ದು, ಇಬ್ಬರು ವ್ಯಕ್ತಿಗಳು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದರು.

ಅದರ ಮರುದಿನ, ಸರಿಸುಮಾರು ಮೂರು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಸೆಂಜಮ್ ಚಿರಾಂಗ್‌ನಲ್ಲಿ ಮತ್ತೊಂದು ಡ್ರೋನ್ ದಾಳಿ ನಡೆಯಿತು. ಮೂವರು ವ್ಯಕ್ತಿಗಳು ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News