"ಅವರು ಅಲ್ಲಿ ಗೌರವಿಸುತ್ತಾರೆ, ಇಲ್ಲಿ ನಾಶಗೊಳಿಸುತ್ತಾರೆ": ಕೆಥೋಲಿಕ್ ಬಿಷಪ್‌ಗಳ ಜೊತೆ ಮೋದಿ ಭೇಟಿ ಕುರಿತು ಟೀಕೆ
ತಿರುವನಂತಪುರ: ದಿಲ್ಲಿಯಲ್ಲಿ ಕೆಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದನ್ನು ಟೀಕಿಸಿರುವ ಕೇರಳದ ಹಿರಿಯ ಆರ್ಥೊಡೆಕ್ಸ್ ಚರ್ಚ್ ಬಿಷಪ್, ‘ಅಲ್ಲಿ ಅವರು ಬಿಷಪ್‌ಗಳನ್ನು ಗೌರವಿಸುತ್ತಾರೆ ಮತ್ತು ಗೋದಲಿಯನ್ನು ಆರಾಧಿಸುತ್ತಾರೆ,ಇಲ್ಲಿ ಅವರು ಗೋದಲಿಗಳನ್ನು ನಾಶಗೊಳಿಸುತ್ತಾರೆ’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.
ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಪ್ರಧಾನ ಬಿಷಪ್ ಯುಹಾನೋನ್ ಮೆಲೆಷಿಯಸ್ ಅವರು, ಪಾಲಕ್ಕಾಡ್‌ನ ಸರಕಾರಿ ಶಾಲೆಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದ ಇತ್ತೀಚಿನ ಎರಡು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಮೊದಲ ಘಟನೆಗೆ ಸಂಬಂಧಿಸಿದಂತೆ ಚಿತ್ತೂರ್‌ನಲ್ಲಿ ಮೂವರು ವಿಹಿಂಪ ನಾಯಕರನ್ನು ಬಂಧಿಸಲಾಗಿದ್ದರೆ ಎರಡನೇ ಪ್ರಕರಣದಲ್ಲಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಶುಕ್ರವಾರ ಪಾಲಕ್ಕಾಡ್‌ನ ನಲ್ಲೆಪಿಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡಿದ್ದಾಗ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಕೆ. ಅನಿಲ್ ಕುಮಾರ್ ನೇತೃತ್ವದ ಮೂವರು ವಿಹಿಂಪ ನಾಯಕರು ಕ್ರಿಸ್ಮಸ್ ಬದಲಿಗೆ ಕೃಷ್ಣ ಜನ್ಮಾಷ್ಟಮಿಯನ್ನು ಏಕೆ ಆಚರಿಸುವುದಿಲ್ಲ ಎಂದು ಶಿಕ್ಷಕರನ್ನು ಪ್ರಶ್ನಿಸಿದ್ದರು. ಶಿಕ್ಷಕರು ಸಾಂತಾ ಕ್ಲಾಸ್ ವೇಷಭೂಷಣವನ್ನು ಧರಿಸಿದ್ದೇಕೆ ಎಂದೂ ಅವರು ಪ್ರಶ್ನಿಸಿದ್ದರು.
ಪ್ರತ್ಯೇಕ ಘಟನೆಯಲ್ಲಿ ಪಾಲಕ್ಕಾಡ್‌ನ ತಥಾಮಂಗಳಂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಗೋದಲಿಯನ್ನು ಸೋಮವಾರ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಸೆಮಿಸ್ಟರ್ ಪರೀಕ್ಷೆಗಳು ಮುಗಿದ ಬಳಿಕ ಕಳೆದ ಶುಕ್ರವಾರದಿಂದ ಶಾಲೆಗೆ ಒಂದು ವಾರ ಕ್ರಿಸ್‌ಮಸ್ ರಜೆ ನೀಡಲಾಗಿತ್ತು. ಈ ಬಗ್ಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು,ತನಿಖೆಯು ಪ್ರಗತಿಯಲ್ಲಿದೆ.
ಕ್ರೈಸ್ತ ಸಮುದಾಯವನ್ನು ಓಲೈಸುವ ಬಿಜೆಪಿಯ ನಿರಂತರ ಪ್ರಯತ್ನಗಳ ಭಾಗವಾಗಿ ಪಕ್ಷದ ನಾಯಕರು ‘ಸ್ನೇಹ ಯಾತ್ರೆ’ ಎಂಬ ಕ್ರಿಸ್ಮಸ್ ಕಾರ್ಯಕ್ರಮದಡಿ ಕೇರಳದಲ್ಲಿಯ ಬಿಷಪ್‌ಗಳನ್ನು ಭೇಟಿಯಾಗುತ್ತಿದ್ದಾರೆ.
ಪಾಲಕ್ಕಾಡ್ ಘಟನೆಗಳ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು, ‘ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದನ್ನು ಕ್ರೈಸ್ತ ಸಮುದಾಯದೊಂದಿಗಿನ ಬಿಜೆಪಿಯ ಸಂಬಂಧವನ್ನು ನಾಶಗೊಳಿಸುವ ದೊಡ್ಡ ಸಂಚಿನ ಭಾಗವಾಗಿ ನೋಡಬೇಕಿದೆ. ಕಳೆದ ವರ್ಷ ಬಿಜೆಪಿಯ ವಯನಾಡ ಜಿಲ್ಲಾಧ್ಯಕ್ಷ ಕೆ.ಮಧು ಅವರು ವನ್ಯಜೀವಿ ದಾಳಿಗಳ ವಿರುದ್ಧ ಪ್ರತಿಭಟಿಸಿದ್ದ ಕ್ರೈಸ್ತ ಧರ್ಮಗುರುಗಳನ್ನು ಬಿಳಿ ನಿಲುವಂಗಿಯಲ್ಲಿರುವ ಭಯೋತ್ಪಾದಕರು ಎಂದು ಬಣ್ಣಿಸಿದ್ದರು ಮತ್ತು ನಾವು ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದೆವು ’ಎಂದು ಹೇಳಿದರು.