ತೀರ್ಮಾನ ಕೈಗೊಳ್ಳುವವರ ಬಗ್ಗೆ ನಂಬಿಕೆ ಇಡಬೇಕಾಗುತ್ತದೆ: ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಕಾರ್ಯವೈಖರಿ ಹಾಗೂ ತೀರ್ಪುಗಳ ಕುರಿತು ಕೇಳಿ ಬರುತ್ತಿರುವ ಆರೋಪ ಮತ್ತು ಟೀಕೆಗಳ ಕುರಿತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಿಧಿ 370ರ ರದ್ದತಿ ಕುರಿತು ಪಂಚ ಸದಸ್ಯರು ನ್ಯಾಯಪೀಠವು ನೀಡಿದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿಗಳು, “ತೀರ್ಪಿನ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸುವುದು ಅಥವಾ ತೀರ್ಪನ್ನು ಸಮರ್ಥಿಸಿಕೊಳ್ಳುವುದು ಎರಡೂ ಸೂಕ್ತವಲ್ಲ” ಎಂದು ಹೇಳಿದ್ದಾರೆ.
“ಅಂಕಿತ ಹಾಕಲ್ಪಟ್ಟಿರುವ ತೀರ್ಪಿನಲ್ಲಿ ನಮೂದಿಸಲಾಗಿರುವ ವರ್ತಮಾನದ ಕಾರಣವು ನನ್ನ ತೀರ್ಪಿನಲ್ಲಿ ಪ್ರತಿಫಲಿಸಿದೆ. ಅದನ್ನು ನಾನು ಅಷ್ಟಕ್ಕೇ ಬಿಟ್ಟುಬಿಡಬೇಕು” ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ.
ಸಲಿಂಗ ವಿವಾಹದ ತೀರ್ಪಿನ ಕುರಿತು ಕೇಳಿ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅವರು, “ಈ ವಿಚಾರದ ಕುರಿತು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ನಾನು ಭವಿಷ್ಯದ ನಮ್ಮ ಸಮಾಜಕ್ಕೇ ಬಿಡುತ್ತೇನೆ” ಎಂದು ಹೇಳಿದ್ದಾರೆ.
ಪ್ರಕರಣಗಳ ಹಂಚಿಕೆ ಹಾಗೂ ವಕೀಲರ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿಗಳು, “ಸುಪ್ರೀಂ ಕೋರ್ಟ್ ನಂತಹ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಬೇಕಿದ್ದರೆ ಸುಪ್ರೀಂ ಕೋರ್ಟ್ ನಲ್ಲಿನ ಪ್ರಕರಣಗಳ ಹಂಚಿಕೆಯು ವಕೀಲರ ಕೇಂದ್ರಿತವಾಗಿರಬಾರದು ಎಂಬುದು ನನ್ನ ಸ್ಪಷ್ಟ ನಿಲುವು” ಎಂದು ಹೇಳಿದ್ದಾರೆ.
ಅಯೋಧ್ಯೆ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಅವರು, ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ನಿರ್ಮಾಣದ ಪರ ತೀರ್ಪು ನೀಡಿದ ಪಂಚ ಸದಸ್ಯರ ನ್ಯಾಯಪೀಠವು, ತೀರ್ಪಿಗೆ ಯಾವುದೇ ನ್ಯಾಯಾಧೀಶರ ಅಂಕಿತವನ್ನು ಹಾಕಬಾರದು ಎಂದು ಸರ್ವಾನುಮತದಿಂದ ತೀರ್ಮಾನಿಸಿತು ಎಂದು ಹೇಳಿದ್ದಾರೆ.
“ರಾಮ ಜನ್ಮಭೂಮಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಾಲಯದ ತೀರ್ಪಾಗಿದೆಯೆ ಹೊರತು ಯಾವುದೇ ಖಾಸಗಿ ವ್ಯಕ್ತಿಯದ್ದಲ್ಲ. ಹೀಗಾಗಿ ತೀರ್ಪಿನಲ್ಲಿ ತೀರ್ಪು ನೀಡಿದವರ ಹೆಸರನ್ನು ನಮೂದಿಸಲಾಗಿಲ್ಲ. ಆ ಪ್ರಕರಣವು ದೀರ್ಘಕಾಲೀನ ಬಿಕ್ಕಟ್ಟಾಗಿತ್ತು ಹಾಗೂ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿತ್ತು” ಎಂದು ನ್ಯಾ. ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ.