ದಿಲ್ಲಿ ವಿಧಾನ ಸಭಾ ಚುನಾವಣೆ ಮತದಾರರ ಪಟ್ಟಿಯಲ್ಲಿ ಅಕ್ರಮ: ದಿಲ್ಲಿ ಸಿಎಂ ಆರೋಪ
ಕೋಲ್ಕತಾ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಿರುವ ಹೊಸದಿಲ್ಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಆತಿಶಿ ಸೋಮವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆತಿಶಿ, ಕಳೆದ ಕೆಲವು ದಿನಗಳಲ್ಲಿ ಹೊಸದಿಲ್ಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶೇ. 10 ಹೊಸ ಮತದಾರರನ್ನು ಸೇರಿಸಲಾಗಿದೆ ಹಾಗೂ ಶೇ. 5.5 ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದರು.
ಈ ವಿಷಯದಲ್ಲಿ ಚುನಾವಣಾ ಆಯೋಗದ ನಡೆಯನ್ನು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸದ ಕಾರಣ ಚುನಾವಣಾ ಆಯೋಗದ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಹೊಸದಿಲ್ಲಿ ವಿಧಾನ ಸಭೆಯಲ್ಲಿ ಈ ಅಕ್ರಮದ ಕುರಿತು ನಾನು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಾದ ಹಾಗೂ ರಾಜ್ಯ ಸಭಾ ಸದಸ್ಯರಾದ ರಾಘವ್ ಚಡ್ಡಾ ಹಾಗೂ ಸಂಜಯ್ ಸಿಂಗ್ ಇದೇ ರೀತಿಯ ಪ್ರತಿಪಾದನೆ ಮಾಡಿದರು. ಮತದಾರರ ಪಟ್ಟಿಯಿಂದ ತನ್ನ ಪತ್ನಿ ಅನಿತಾ ಸಿಂಗ್ ಅವರ ಹೆಸರನ್ನು ಅಳಿಸಲು ಅರ್ಜಿ ಸಲ್ಲಿಸಲಾಗಿದೆ ಎಂದು ಸಂಜಯ್ ಸಿಂಗ್ ಪ್ರತಿಪಾದಿಸಿದ್ದಾರೆ.
ದಿಲ್ಲಿ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಹೆಸರನ್ನು ಸಾಮೂಹಿಕವಾಗಿ ಅಳಿಸುತ್ತಿರುವ ಆರೋಪವನ್ನು ಪರಿಹರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಿಯೋಗ ಡಿಸೆಂಬರ್ 11ರಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು.