ಜಾರಿ ನಿರ್ದೇಶನಾಲಯದ ಲಾಕಪ್ ನಿಂದಲೇ ಮೊದಲ ಸರ್ಕಾರಿ ನಿರ್ದೇಶನ ಹೊರಡಿಸಿದ ದಿಲ್ಲಿ ಸಿಎಂ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೆರೆವಾಸದಿಂದಲೇ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದೆ ಎಂಬ ಸುತ್ತ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಿಗೇ ಜಾರಿ ನಿರ್ದೇಶನಾಲಯದ ಲಾಕಪ್ ನಲ್ಲಿರುವ ಅರವಿಂದ್ ಕೇಜ್ರಿವಾಲ್ ಅಲ್ಲಿಂದ ತಮ್ಮ ಪ್ರಥಮ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶವು ರಾಷ್ಟ್ರ ರಾಜಧಾನಿ ದಿಲ್ಲಿಯ ನೀರು ಸರಬರಾಜಿಗೆ ಸಂಬಂಧಿಸಿದ್ದಾಗಿದ್ದು, ಈ ಖಾತೆಯನ್ನು ಹೊಂದಿರುವ ದಿಲ್ಲಿ ಸಚಿವೆ ಅತಿಶಿಗೆ ಈ ಕುರಿತು ಅವರು ಟಿಪ್ಪಣಿಯೊಂದನ್ನು ರವಾನಿಸಿದ್ದಾರೆ.
ಇದರ ಬೆನ್ನಿಗೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಟಿಪ್ಪಣಿಯನ್ನು ಅತಿಶಿ ಓದುವಾಗ ಭಾವುಕರಾದರು. “ಅರವಿಂದ್ ಕೇಜ್ರಿವಾಲ್ ಅವರು ನನಗೆ ಪತ್ರ ಹಾಗೂ ನಿರ್ದೇಶನವೊಂದನ್ನು ರವಾನಿಸಿದ್ದಾರೆ. ಅದನು ಓದಿ ನಾನು ಕಣ್ಣೀರಾದೆ. ಜೈಲಿನಲ್ಲಿರುವಾಗಲೂ ದಿಲ್ಲಿ ನಿವಾಸಿಗಳ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಕುರಿತು ಚಿಂತಿಸುತ್ತಿರುವ ಈ ವ್ಯಕ್ತಿ ಯಾರು ಎಂದು ನಾನು ಯೋಚಿಸತೊಡಗಿದೆ. ಇದನ್ನು ಅರವಿಂದ್ ಕೇಜ್ರಿವಾಲ್ ಮಾತ್ರ ಮಾಡಲು ಸಾಧ್ಯ. ಯಾಕೆಂದರೆ, ಅವರು ದಿಲ್ಲಿಯ ಎರಡು ಕೋಟಿ ನಿವಾಸಿಗಳನ್ನು ತಮ್ಮ ಕುಟುಂಬವೆಂದೇ ಭಾವಿಸಿದ್ದಾರೆ” ಎಂದು ಭಾವುಕವಾಗಿ ಹೇಳಿದರು.
“ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ನೀವು ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸಿ, ಅವರನ್ನು ಜೈಲಿನಲ್ಲಿಡಬಹುದು. ಆದರೆ, ಅವರ ದಿಲ್ಲಿ ಜನರೆಡೆಗಿನ ಪ್ರೀತಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ಬಂಧನದಲ್ಲಿಡಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ ಅತಿಶಿ, ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದರೂ, ಯಾವುದೇ ಕೆಲಸ ಸ್ಥಗಿತಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅರವಿಂದ್ ಕೇಜ್ರಿವಾಲ್ ಬಂಧನದ ಹೊರತಾಗಿಯೂ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಆಪ್ ಸ್ಪಷ್ಟಪಡಿಸಿದೆ.