ದಿಲ್ಲಿ:ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
ಹೊಸದಿಲ್ಲಿ: ದಿಲ್ಲಿಯ ವಿವೇಕ ವಿಹಾರ ಪ್ರದೇಶದಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು,ಏಳು ನವಜಾತ ಶಿಶುಗಳು ಮೃತಪಟ್ಟಿವೆ. ವಿವೇಕ ವಿಹಾರ ಪ್ರದೇಶದ ‘ಬಿ’ ಬ್ಲಾಕ್‌ನಲ್ಲಿಯ ನ್ಯೂಬಾರ್ನ್ ಬೇಬಿ ಕೇರ್ ಹಾಸ್ಪಿಟಲ್‌ನಲ್ಲಿ ಈ ದುರಂತ ಸಂಭವಿಸಿದೆ. ಆಸ್ಪತ್ರೆಯ ಮಾಲಿಕ ನವೀನ ಕಿಚಿ ತಲೆ ಮರೆಸಿಕೊಂಡಿದ್ದು,ಆತ ಜೈಪುರಕ್ಕೆ ಪರಾರಿಯಾಗಿದ್ದಾನೆಂದು ಪೋಲಿಸರು ಶಂಕಿಸಿದ್ದಾರೆ. ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಬಂಧನಕ್ಕಾಗಿ ವಿಶೇಷ ಪೋಲಿಸ್ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾತ್ರಿ 11:32ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿದ್ದ ಹಲವಾರು ಆಕ್ಸಿಜನ್ ಸಿಲಿಂಡರಗಳು ಸ್ಫೋಟಗೊಳ್ಳತೊಡಗಿದಾಗ ಬೆಂಕಿ ಇನ್ನಷ್ಟು ತೀವ್ರಗೊಂಡು ವ್ಯಾಪಕವಾಗಿ ಹರಡಿತ್ತು ಮತ್ತು ಭಾರೀ ಹಾನಿಗೆ ಕಾರಣವಾಗಿತ್ತು.
‘ರಾತ್ರಿ 11:32ಕ್ಕೆ ನಮಗೆ ಕರೆ ಬಂದಿತ್ತು. ಆರಂಭದಲ್ಲಿ ಏಳು ಅಗ್ನಿಶಾಮಕ ವಾಹನಗಳನ್ನು ಮತ್ತು ನಂತರ ಇನ್ನೂ 14 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿದ್ದೆವು. ನಾಲ್ಕೈದು ಸ್ಫೋಟಗಳು ಸಂಭವಿಸಿದ್ದರಿಂದ ಬೆಂಕಿ ತೀವ್ರಗೊಂಡಿತ್ತು,ಆಕ್ಸಿಜನ್ ಸಿಲಿಂಡರ್‌ಗಳು 50 ಮೀ.ಗಳಷ್ಟು ದೂರಕ್ಕೆ ಹಾರುತ್ತಿದ್ದವು. ಆಸ್ಪತ್ರೆಯು ನೆಲಅಂತಸ್ತು ಮತ್ತು ಮೂರು ಅಂತಸ್ತುಗಳನ್ನು ಹೊಂದಿದ್ದು,ಮಕ್ಕಳನ್ನು ಮೊದಲ ಅಂತಸ್ತಿನಲ್ಲಿ ಇರಿಸಲಾಗಿತ್ತು ಮತ್ತು ಎರಡನೇ ಅಂತಸ್ತನ್ನು ದಾಸ್ತಾನು ಸ್ಥಳವಾಗಿ ಬಳಸಲಾಗುತ್ತಿತ್ತು. ಬೆಂಕಿ ಇತರ ಅಂತಸ್ತುಗಳಿಗೂ ಹರಡಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಮೂರು ಗಂಟೆಗಳ ಕಾಲ ಶ್ರಮಿಸಿದ್ದು,ಈ ವೇಳೆ ನವಜಾತ ಶಿಶುಗಳನ್ನು ಪತ್ತೆ ಹಚ್ಚಿ ಅವುಗಳನ್ನು ರಕ್ಷಿಸುವುದು ಸವಾಲಿನ ಕಾರ್ಯವಾಗಿತ್ತು ಎಂದು ತಿಳಿಸಿದ ಮುಖ್ಯ ಅಗ್ನಿಶಾಮಕ ಅಧಿಕಾರಿ ಅತುಲ್ ಗರ್ಗ್ ಅವರು,‘ಒಳಗೆ ಸಿಕ್ಕಿಬಿದ್ದಿದ್ದ ಮಕ್ಕಳ ನಿಖರವಾದ ಸಂಖ್ಯೆ ನಮಗೆ ಗೊತ್ತಿರಲಿಲ್ಲ. ವಿದ್ಯುತ್ ಕಂಬದಲ್ಲಿ ಉಂಟಾಗಿದ್ದ ಕಿಡಿಯು ಬೆಂಕಿಗೆ ಕಾರಣವಾಗಿರುವಂತೆ ಕಂಡು ಬರುತ್ತಿದೆ. ಕಿಡಿಯಿಂದ ಅಲ್ಲಿ ನಿಲ್ಲಿಸಲಾಗಿದ್ದ ವಾಹನಕ್ಕೆ ಬೆಂಕಿ ಹತ್ತಿಕೊಂಡಿತ್ತು ಮತ್ತು ಅಂತಿಮವಾಗಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಬೆಂಕಿ ಆವರಿಸಿಕೊಂಡಿತ್ತು’ ಎಂದು ಹೇಳಿದರು. ಆಸ್ಪತ್ರೆಯಿಂದ 12 ನವಜಾತ ಶಿಶುಗಳನ್ನು ರಕ್ಷಿಸಿ ಬೇರೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಆರು ಶಿಶುಗಳು ಮೃತಪಟ್ಟಿದ್ದು,ಇನ್ನೊಂದು ಶಿಶು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ. ಐದು ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ಸುರೇಂದ್ರ ಚೌಧರಿ ತಿಳಿಸಿದರು.
ಘಟನೆಯ ಕುರಿತು ತನಿಖೆಗೆ ಆದೇಶಿಸಿರುವ ದಿಲ್ಲಿಯ ಆರೋಗ್ಯ ಸಚಿವ ಸೌರಭ ಭಾರದ್ವಾಜ್ ಅವರು,ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯದರ್ಶಿ ದೀಪಕ ಕುಮಾರ ಅವರನ್ನು ಸಂಪರ್ಕಿಸಲು ತಾನು ಹಲವಾರು ಸಲ ಪ್ರಯತ್ನಿಸಿದ್ದೆ,ಆದರೆ ಅವರು ಈವರೆಗೂ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಿದರು.
ಭಾರದ್ವಾಜ್ ಗಾಯಗೊಂಡಿರುವ ಮತ್ತು ಮೃತ ಮಕ್ಕಳ ಕುಟುಂಬಗಳಿಗೆ ತ್ವರಿತ ಪರಿಹಾರವನ್ನು ಖಚಿತಪಡಿಸಲು ಮತ್ತು ಆಸ್ಪತ್ರೆಯ ಮಾಲಿಕರ ಬಂಧನಕ್ಕೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಲು ಇಬ್ಬರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣಗಳ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ. ಈ ದುರಂತಕ್ಕೆ ಹೊಣೆಯಾಗಿರುವವರನ್ನು ಬಿಡುವುದಿಲ್ಲ,ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು.
ಅರವಿಂದ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ
ಆಸ್ಪತ್ರೆಯ ಕಟ್ಟಡವು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ)ವನ್ನು ಪಡೆದುಕೊಂಡಿತ್ತು ಎಂದು ಹೇಳಲಾಗಿದೆ,ಆದರೆ ಇಲಾಖೆಯಲ್ಲಿ ಆ ಬಗ್ಗೆ ಯಾವುದೇ ದಾಖಲೆಯಿಲ್ಲ. ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಕಟ್ಟಡವು ಎನ್‌ಒಸಿ ಹೊಂದಿರಲಿಲ್ಲ ಎನ್ನುವುದು ದೃಢಪಟ್ಟರೆ ಅದರ ಮುಚ್ಚುಗಡೆಗೆ ನಾವು ಶಿಫಾರಸು ಮಾಡುತ್ತೇವೆ. ಸೂಕ್ತ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸಲಾಗಿತ್ತೇ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ,ಆದರೆ ಕಟ್ಟಡವು ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಅದು ಕಷ್ಟವಾಗಲಿದೆ.
ಅತುಲ್ ಗರ್ಗ್ , ಮುಖ್ಯ ಅಗ್ನಿಶಾಮಕ ಅಧಿಕಾರಿ