ಯಮುನಾ ನದಿಯಲ್ಲಿ ಛಾತ್ ಪೂಜೆಗೆ ಅನುಮತಿ ನೀಡಲು ದಿಲ್ಲಿ ಹೈಕೋರ್ಟ್ ನಕಾರ
ಹೊಸದಿಲ್ಲಿ: ದಿಲ್ಲಿಯ ಗೀತಾ ಕಾಲನಿಯ ಬಳಿಯ ಯಮುನಾ ನದಿ ದಂಡೆಯಲ್ಲಿ ಛಾತ್ ಪೂಜೆ ಮಾಡಲು ಭಕ್ತರಿಗೆ ಅನುಮತಿ ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ನದಿಯು ಅಗಾಧ ಪ್ರಮಾಣದಲ್ಲಿ ಮಾಲಿನ್ಯಕ್ಕೆ ಒಳಗಾಗಿರುವ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿತು.
‘‘ಅದು ನಿಮಗೆ ತುಂಬಾ ಹಾನಿಕರವಾಗಿದೆ. ನದಿಯು ಎಷ್ಟು ಕಲುಷಿತವಾಗಿದೆಯೆಂದರೆ, ಅದರಲ್ಲಿ ನೀವು ಮುಳುಗಿದರೆ ನಿಮಗೆ ಹಾನಿಯಾಗುವ ಸಾಧ್ಯತೆಯಿದೆ. ನಾವು ಅದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಾಧೀಶ ಮನಮೋಹನ್ ಮತ್ತು ನ್ಯಾಯಾಧೀಶ ತುಷಾರ್ ರಾವ್ ಗೆಡೆಲ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಈ ಭಾಗದಲ್ಲಿ ಯುಮುನಾ ನದಿಯು ಅತ್ಯಂತ ಕಲುಷಿತವಾಗಿದೆ ಹಾಗೂ ನದಿ ದಂಡೆಯಲ್ಲಿ ಛಾತ್ ಪೂಜೆ ನಡೆಸಲು ಭಕ್ತರಿಗೆ ಅನುಮತಿ ನೀಡಿದರೆ ಅವರು ಕಾಯಿಲೆ ಬೀಳಬಹುದು ಎಂದು ದಿಲ್ಲಿ ಸರಕಾರದ ವಕೀಲ ಸಂತೋಷ್ ಕುಮಾರ್ ತ್ರಿಪಾಠಿ ಹೈಕೋರ್ಟ್‌ಗೆ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಛಾತ್ ಪೂಜೆ ಮಾಡಲು ದಿಲ್ಲಿ ಸರಕಾರವು 1,000 ಸ್ಥಳಗಳನ್ನು ನಿಗದಿಪಡಿಸಿದೆ ಮತ್ತು ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಶಬ್ನಮ್ ಬರ್ನಿ ಪ್ರಕರಣದಲ್ಲಿ ತಾನು ಇತ್ತೀಚೆಗೆ ನೀಡಿದ ಆದೇಶವನ್ನು ಉಲ್ಲೇಖಿಸಿತು. ಯಮುನಾ ನದಿಯ ಮಾಲಿನ್ಯವು ಸಾರ್ವಕಾಲಿಕ ಗರಿಷ್ಠವಾಗಿದೆ ಎಂಬುದಾಗಿ ಆ ಆದೇಶದಲ್ಲಿ ಹೇಳಲಾಗಿತ್ತು.
ಮೊದಲ ದಿನದ ಛಾತ್ ಪೂಜೆಯ ವೇಳೆ ಮಂಗಳವಾರ, ಯಮುನಾ ನದಿಯಲ್ಲಿ ರಾಸಾಯನಿಕ ನೊರೆಯ ಪದರಗಳು ತೇಲುತ್ತಿದ್ದರೂ ಸಾಕಷ್ಟು ಸಂಖ್ಯೆಯ ಭಕ್ತರು ನೀರಿನಲ್ಲಿ ಮುಳುಗಿ ಸ್ನಾನ ಮಾಡಿದ್ದರು.