ದಿಲ್ಲಿ | ಐಎಎಸ್ ಆಕಾಂಕ್ಷಿ ಆತ್ಮಹತ್ಯೆ
ಹೊಸದಿಲ್ಲಿ : ಖಿನ್ನತೆ ಹಾಗೂ ಒತ್ತಡ ನಿಭಾಯಿಸಲು ಸಾಧ್ಯವಾಗದೆ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಯೋರ್ವರು ಹೊಸದಿಲ್ಲಿಯ ಹಳೆಯ ರಾಜಿಂದರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಯನ್ನು ಮಹಾರಾಷ್ಟ್ರ ಅಕೋಲಾದ ಅಂಜಲಿ ಎಂದು ಗುರುತಿಸಲಾಗಿದೆ. ಆಕೆ ದಿಲ್ಲಿಯ ನಾಗರಿಕ ಸೇವಾ ಪರೀಕ್ಷೆಯ ಕೇಂದ್ರವಾದ ಹಳೆಯ ರಾಜಿಂದರ್ ನಗರ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ತಂಗಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ರಾಜಿಂದರ್ ನಗರ್ ಪ್ರದೇಶದಲ್ಲಿರುವ ತರಬೇತು ಕೇಂದ್ರಗಳಲ್ಲಿ ಒಂದಾದ ರಾವ್ಸ್ ಸ್ಟಡಿ ಸರ್ಕಲ್‌ನ ನೆಲ ಮಹಡಿಯಲ್ಲಿ ನೆರೆಯಿಂದಾಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಮೃತಪಟ್ಟ ಮೂರು ದಿನಗಳ ಮುನ್ನ ಜುಲೈ 21ರಂದು ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕೆ ತನ್ನ ಸುಸೈಡ್ ನೋಟ್‌ನಲ್ಲಿ ಸರಕಾರಿ ಪರೀಕ್ಷೆಗಳಲ್ಲಿ ಹಗರಣಗಳನ್ನು ಕಡಿಮೆ ಮಾಡುವಂತೆ ಹಾಗೂ ಉದ್ಯೋಗ ಸೃಷ್ಟಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಮನೆ ಬಾಡಿಗೆಯನ್ನು ಏರಿಕೆ ಮಾಡಿರುವುದರಿಂದ ತಾನು ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾಳೆ.
ಸುಸೈಡ್ ನೋಟ್‌ನಲ್ಲಿ ಅಂಜಲಿ, ತನ್ನ ಬದುಕಿನ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗದೇ ಇರುವುದನ್ನು ಹಾಗೂ ಮನ ಶಾಂತಿಯ ಕೊರತೆಯನ್ನು ವಿವರಿಸಿದ್ದಾಳೆ.
‘‘ದಯವಿಟ್ಟು ಕ್ಷಮಿಸಿ ಅಪ್ಪಾ, ಅಮ್ಮಾ. ನಾನು ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಕೇವಲ ಸಮಸ್ಯೆಗಳು ಮಾತ್ರ ಇವೆ. ಮನ ಶಾಂತಿ ಇಲ್ಲ. ನನಗೆ ಮನ ಶಾಂತಿ ಬೇಕಾಗಿದೆ. ಖಿನ್ನತೆಯನ್ನು ತೊಡೆದು ಹಾಕಲು ನಾನು ಸಾಧ್ಯವಿರುವ ರೀತಿಯಲ್ಲೆಲ್ಲಾ ಪ್ರಯತ್ನಿಸಿದ್ದೇನೆ. ಆದರೆ, ನನಗೆ ಅದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ನಾನು ವೈದ್ಯರನ್ನು ಭೇಟಿಯಾದೆ. ಆದರೆ, ನನ್ನ ಮಾನಸಿಕ ಆರೋಗ್ಯ ಸುಧಾರಣೆಯಾಗಲಿಲ್ಲ’’ ಎಂದು ಅಂಜಲಿ ಸುಸೈಡ್ ನೋಟ್‌ನಲ್ಲಿ ಹೇಳಿದ್ದಾರೆ.
ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.